ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ದೇಶದ ಅತೀ ಉದ್ದದ ಸೇತುವೆ ಎಂದೇ ಖ್ಯಾತಿಗಳಿಸಿರುವ ಧೋಲಾ ಮತ್ತು ಸದಿಯಾ ಸೇತುವೆಯನ್ನು ಇಂದು ಲೋಕಾರ್ಪಣೆ ಮಾಡಲಿದ್ದಾರೆ.
ಎನ್ ಡಿಎ ಸರ್ಕಾರಕ್ಕೆ 3 ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶಾದ್ಯಂತ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿಯೇ ಸೇತುವೆ ಉದ್ಘಾಟನೆ ಕಾರ್ಯಕ್ರಮ ಕೂಡ ನಡೆಯಲಿದೆ. ಸೇತುವೆ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಗುವಾಹಟಿಯಲ್ಲಿ ಸಾರ್ವಜನಿಕ ರಾರಯಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಸರ್ಕಾರದ ಈವರೆಗಿನ ಸಾಧನೆ ಹಾಗೂ ಮುಂದಿನ ಗುರಿಯನ್ನು ವಿವರಿಸಲಿದ್ದಾರೆ.
ದೇಶದ ಅತೀ ದೊಡ್ಡ ಸೇತುವೆ ಎಂದು ಖ್ಯಾತಿ ಗಳಿಸಿದ ಧೋಲಾ ಮತ್ತು ಸದಿಯಾ ಸೇತುವೆ
ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ದೇಶದ ಅತಿ ಉದ್ದದ ಸೇತುವೆ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ. ಅಸ್ಸಾಂನ ಧೋಲಾ ಮತ್ತು ಸದಿಯಾ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಗಡಿರಾಜ್ಯ ಅರುಣಾಚಲ ಮತ್ತು ಅಸ್ಸಾಂ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಎರಡೂ ರಾಜ್ಯಗಳು ಚೀನಾ ಗಡಿಗೆ ಹೊಂದಿಕೊಂಡಂತೆ ಇರುವುದರಿಂದ ವ್ಯೂಹಾತ್ಮಕವಾಗಿ ಇದು ಅತ್ಯಂತ ಮಹತ್ವದ್ದಾಗಿದೆ ಎನ್ನಲಾಗಿದೆ. ಒಂದು ವೇಳೆ ಅಗತ್ಯ ಬಿದ್ದರೆ ಅರುಣಾಚಲ ಪ್ರದೇಶಕ್ಕೆ ಸೇನೆಯನ್ನು ರವಾನಿಸಲು ಕೂಡ ಈ ಸೇತುವೆ ನೆರವಾಗುವಂತೆ ಮುಂದಾಲೋಚನೆಯಿಂದ ಸೇತುವೆ ನಿರ್ಮಾಣ ಮಾಡಲಾಗಿದೆ.
ಸುಮಾರು 60 ಟನ್ ತೂಕದ ಯುದ್ಧ ಟ್ಯಾಂಕರ್ ಗಳನ್ನು ಹೊರುವ ಸಾಮರ್ಥ್ಯ ಈ ಸೇತುವೆಗಿದ್ದು, ಇದೇ ಕಾರಣಕ್ಕೆ ಈ ಸೇತುವೆ ಭಾರತಕ್ಕೆ ಚೀನಾ ವಿರುದ್ಧ ಬಲ ತಂದು ಕೊಡುತ್ತದೆ.
ಸುಮಾರು 9.15 ಕಿ.ಮೀ. ಉದ್ದವಿರುವ ಈ ಸೇತುವೆ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆ (5.6 ಕಿ.ಮೀ.)ಗಿಂತ ಶೇ.30ರಷ್ಟು ಉದ್ದವಾಗಿದೆ. ಬ್ರಹ್ಮಪುತ್ರಾ ನದಿಯ ಮೇಲೆ ನಿರ್ಮಾಣಗೊಂಡಿರುವ ನಾಲ್ಕನೇ ಸೇತುವೆ ಇದಾಗಿದ್ದು, ಸೇನಾ ಸಿಬ್ಬಂದಿಗೆ ಅಸ್ಸಾಂನಿಂದ ಅರುಣಾಚಲ ಪ್ರದೇಶ-ಚೀನಾ ಗಡಿ ಪ್ರದೇಶದಲ್ಲಿರುವ ಪೋಸ್ಟ್‌ಗಳಿಗೆ ತೆರಳಲು ನೆರವಾಗಲಿದೆ. ಈ ಸೇತುವೆ ಗುವಾಹತಿಯಿಂದ 540 ಕಿ.ಮೀ ದೂರದಲ್ಲಿದ್ದು, ಮತ್ತೊಂದು ತುದಿ ಅರುಣಾಚಲ ಪ್ರದೇಶ ರಾಜಧಾನಿ ಇಟಾನಗರದಿಂದ 300 ಕಿ.ಮೀ ದೂರದಲ್ಲಿದೆ.
2011ರಲ್ಲಿ ಅಸ್ಸಾಂ ನಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ಈ ಸೇತುವೆ ಕಾಮಗಾರಿ ಆರಂಭವಾಗಿತ್ತು. ಈ ಸೇತುವೆ ನಿರ್ಮಾಣಕ್ಕೆ 950 ಕೋಟಿ ರು.ವೆಚ್ಚ ಮಾಡಲಾಗಿದ್ದು, ಗಡಿ ರಾಜ್ಯಗಳ ಮೂಲಸೌಕರ್ಯಾಭಿವೃದ್ದಿಗೆ 2005ರಲ್ಲಿ ಕೇಂದ್ರ ಸರ್ಕಾರ ನೀಡಿದ್ದ 15 ಸಾವಿರ ಕೋಟಿ ರು.ಪ್ಯಾಕೇಜ್ ನಡಿಯಲ್ಲಿನ ಹಣ ಕೂಡ ಈ ಅತೀ ಉದ್ದದ ಸೇತುವೆ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.