ಯೋಧರ ಶಿರಚ್ಛೇದ ಮಾಡಿದ್ದ ಇಬ್ಬರು ಪಾಕ್ ಉಗ್ರರ ಹತ್ಯೆ!
ಶುಕ್ರವಾರ ಉರಿಯಲ್ಲಿ ಸಾವನ್ನಪ್ಪಿದ್ದ ಇಬ್ಬರು ಉಗ್ರರು ಈ ಹಿಂದೆ ಭಾರತೀಯ ಯೋಧರ ಶಿರಚ್ಛೇದ ಮಾಡಿದ್ದ ಉಗ್ರರೇ ಎಂದು ತಿಳಿದುಬಂದಿದೆ.
ಶ್ರೀನಗರ: ಶುಕ್ರವಾರ ಉರಿಯಲ್ಲಿ ಸಾವನ್ನಪ್ಪಿದ್ದ ಇಬ್ಬರು ಉಗ್ರರು ಈ ಹಿಂದೆ ಭಾರತೀಯ ಯೋಧರ ಶಿರಚ್ಛೇದ ಮಾಡಿದ್ದ ಉಗ್ರರೇ ಎಂದು ತಿಳಿದುಬಂದಿದೆ.
ಸರ್ಜಿಕಲ್ ದಾಳಿ ಮತ್ತು ಸೇನಾ ಪೋಸ್ಟ್ಗಳನ್ನು ಧ್ವಂಸ ಮಾಡಿದ ಹೊರತಾಗಿಯೂ ಪಾಠ ಕಲಿಯದ ಪಾಕ್ ಮತ್ತೆ ಭಾರತೀಯ ಯೋಧರ ಮೇಲೆ ದಾಳಿಗೆ ಮುಂದಾಗಿದ್ದು, ಇದೀಗ ಭಾರತೀಯ ಯೋಧರು ತಮ್ಮದೇ ಶೈಲಿಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ನಿನ್ನೆ ಉರಿ ಸೆಕ್ಚರ್ ಮೂಲಕ ಭಾರತೀಯ ಪೋಸ್ಚ್ ಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದ ಪಾಕಿಸ್ತಾನ ಸೇನೆಯ ಕೃಪಾಪೋಷಿತ ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್ (ಬ್ಯಾಟ್)ನ ಇಬ್ಬರು ಯೋಧರನ್ನು ಭಾರತೀಯ ಯೋಧರು ಸದೆಬಡಿದಿದ್ದಾರೆ.
ಸೇನಾ ಮೂಲಗಳ ಪ್ರಕಾರ ಈ ಹಿಂದೆ ಭಾರತೀಯ ಯೋಧರನ್ನು ಕೊಂದು ಅವರ ಶಿರಚ್ಛೇದ ಮಾಡಿದ್ದ ಉಗ್ರರು ಕೂಡ ಇವರೇ ಎಂದು ಶಂಕಿಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಇದೇ ಬ್ಯಾಟ್ ಉಗ್ರರ ಪಡೆ, ಭಾರತದ ಗಡಿಯೊ ಳಗೆ ನುಗ್ಗಿ, ಇಬ್ಬರು ಭಾರತೀಯ ಯೋಧರ ಶಿರಚ್ಛೇದ ಮಾಡಿ ಪರಾರಿಯಾಗಿತ್ತು. ಶುಕ್ರವಾರ ಇದಕ್ಕೆ ತಿರುಗೇಟು ನೀಡುವ ಮೂಲಕ ಬಿಎಸ್ಎಫ್ ಸೇಡು ತೀರಿಸಿಕೊಂಡಿದೆ.
ಗಡಿಯಲ್ಲಿ ಭಾರತಕ್ಕೆ ತೊಂದರೆ ಕೊಡಲೆಂದೇ ಪಾಕಿಸ್ತಾನ ಸೇನೆ ರಚಿಸಿರುವ ಬ್ಯಾಟ್ ಪಡೆಯ ಇಬ್ಬರು ಶುಕ್ರವಾರ, ಗಡಿ ನಿಯಂತ್ರಣಾ ರೇಖೆಯನ್ನು ದಾಟಿ, ಭಾರತೀಯ ಸೇನಾ ನೆಲೆಯ 600 ಮೀಟರ್ ಸಮೀಪಕ್ಕೆ ಬಂದಿದ್ದರು. ಸೇನಾ ನೆಲೆಯ ಸಮೀಪ ಅಳವಡಿಸಿರುವ ರಕ್ಷಣಾ ವ್ಯವಸ್ಥೆಗಳು ಈ ಬಗ್ಗೆ ಸೂಚನೆ ರವಾನಿಸಿವೆ. ತಕ್ಷಣವೇ ತುರ್ತು ಕ್ರಿಯಾ ಪಡೆ ಕಾರ್ಯಾಚರಣೆ ನಡೆಸಿ, ಬ್ಯಾಟ್ ನ ಇಬ್ಬರು ಸದಸ್ಯರನ್ನು ಗುಂಡಿನ ಕಾಳಗದಲ್ಲಿ ಹತ್ಯೆ ಮಾಡಿದೆ. ಇಬ್ಬರು ಒಳನುಸುಳುಕೋರರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದ್ದು, ಜಮ್ಮು- ಕಾಶ್ಮೀರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.