ರಸ್ತೆ ಬದಿ ಮೂತ್ರ ವಿಸರ್ಜಿಸುತ್ತಿದ್ದ ಯುವಕರ ತಡೆದ ಆಟೋ ಚಾಲಕನ ಹತ್ಯೆ!
ನವದೆಹಲಿ: ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರನ್ನು ತಡೆದ ಇ-ಆಟೋ ರಿಕ್ಷಾ ಚಾಲಕನನ್ನು ಹತ್ಯೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನವದೆಹಲಿಯ ಜಿಟಿಬಿ ನಗರ ಮೆಟ್ರೋ ನಿಲ್ದಾಣದ ಹೊರಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರನ್ನು ತಡೆದ ಆಟೋಚಾಲಕನ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ್ದು ಸಾಯುವಂತೆ ಹೊಡೆದಿದ್ದಾರೆ. ಹತ್ಯೆ ಮಾಡಿರುವವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಶನಿವಾರ ಸಂಜೆ ಅಂಗಡಿಯಿಂದ ತಂದಿದ್ದ ಮದ್ಯವನ್ನು ಮೆಟ್ರೋ ನಿಲ್ದಾಣದ ಗೇಟ್ ನಂ.4 ರ ಬಳಿ ಕುಳಿತು ಕುಡಿದಿದ್ದ ಯುವಕರ ಗುಂಪು, ಮೆಟ್ರೋ ನಿಲ್ದಾಣದ ಹೊರ ಭಾಗದಲ್ಲೇ ಮೂತ್ರ ವಿಸರ್ಜನೆಯನ್ನೂ ಮಾಡಿದ್ದರು. ಇದನ್ನು ಗಮನಿಸಿದ ಇ-ಆಟೋರಿಕ್ಷಾ ಚಾಲಕ ರವೀಂದರ್ ಯುವಕರ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣಕ್ಕೆ ಅಲ್ಲಿಂದ ಹೋದ ಯುವಕರು ಮತ್ತೆ ರಾತ್ರಿ 8 ಗಂಟೆ ವೇಳೆಗೆ ಮೆಟ್ರೋ ನಿಲ್ದಾಣದ ಬಳಿ ಬಂದು ರವೀಂದರ್ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
"ಯುವಕರು ರವೀಂದರ್ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಮಧ್ಯಪ್ರವೇಶಿಸಲು ಯತ್ನಿಸಿದ ಮತ್ತೋರ್ವ ಆಟೋ ಚಾಲಕನ ಮೇಲೆಯೂ ಹಲ್ಲೆ ನಡೆಸಲಾಗಿದೆ. ತೀವ್ರವಾಗಿ ಹಲ್ಲೆಗೊಳಗಾದ ರವೀಂದರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕುಳಿಯಲಿಲ್ಲ, ಹಲ್ಲೆ ನಡೆಸಿದ ಯುವಕರ ಫೋಟೊ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.