ಗಿರಿಡೀಹ್: ಜಾರ್ಖಂಡ್ ನಲ್ಲಿ ರೈಲು ಹಳಿ ಸ್ಫೋಟಿಸುವ ಮೂಲಕ ಮಾವೋವಾದಿಗಳು ಬಂದ್ ಗೆ ಚಾಲನೆ ನೀಡಿದ್ದಾರೆ.
ಹೌರಾ-ನವದೆಹಲಿ ಗ್ರಾಂಡ್ ಕಾರ್ಡ್ ವಿಭಾಗದ ಹಳಿಒಯನ್ನು ಮಾವೋವಾದಿಗಳು ಸ್ಫೋಟಿಸಿದ್ದು, ರಾಜಧಾನಿ ಎಕ್ಸ್ ಪ್ರೆಸ್ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ಮಾವೋವಾದಿಗಳ ದಾಳಿ ಬಗ್ಗೆ ರೈಲ್ವೆ ವಿಭಾಗದ ಎಸ್ ಪಿ ಮಾಹಿತಿ ನೀಡಿದ್ದು, ಚಿಚಕಿ-ಕರ್ಮಾಬಾದ್ ನಿಲ್ದಾಣಗಳ ನಡುವಿನ ಹಳಿಯನ್ನು ಮಾವೋವಾದಿಗಳು ಮೇ.28 ರ ಮಧ್ಯರಾತ್ರಿ 12:40 ಕ್ಕೆ ಸ್ಫೋಟಿಸಿದ್ದರು. ಪರಿಣಾಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ವ್ಯತ್ಯವಾಗಿತ್ತು. ಹಲವು ಗೂಡ್ಸ್ ರೈಲುಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿತ್ತು. ಬೆಳಿಗ್ಗೆ 7:40 ರ ವೇಳೆಗೆ ಹಳಿಯನ್ನು ದುರಸ್ತೊಗೊಳಿಸಲಾಯಿತು ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೇ ರೈಲ್ವೆಯ ರಕ್ಷಣಾ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಾವೋವಾದಿಗಳ ಅಟ್ಟಹಾಸ ಇಷ್ಟಕ್ಕೇ ಮುಗಿಯದೇ ಧವತಂದ್ ಎಂಬ ಪ್ರದೇಶದಲ್ಲಿ ಮಾವೋವಾದಿಗಳು ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.