ಬಿಜೆಪಿ ಶಾಸಕ ಡಾ.ರಾಧಾ ಮೋಹನ್ ದಾಸ್ ಅಗರ್ ವಾಲ್
ಸಂತ ಕಬೀರ್ ನಗರ: ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರನ್ನು ನಿಂದಿಸಿ ಕಣ್ಣೀರು ಹಾಕಿಸಿ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದ ಬಿಜೆಪಿ ಶಾಸಕ ಡಾ.ರಾಧಾ ಮೋಹನ್ ದಾಸ್ ಅಗರ್ ವಾಲ್ ಅವರು ಮತ್ತೆ ತಮ್ಮ ಉದ್ದಟತನವನ್ನು ಮುಂದುವರೆಸಿದ್ದು, ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಲು ಬಂದ ಮಹಿಳೆಯೊಬ್ಬರಿಗೆ ಅವಮಾನ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದ್ದ ಹಿನ್ನಲೆಯಲ್ಲಿ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನು ನಡೆಸಲಾಗಿತ್ತು. ರ್ಯಾಲಿಗೆ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಆಗಮಿಸಿದ್ದರು. ಈ ವೇಳೆ ಮಹಿಳೆಯೊಬ್ಬರು ಮೂಲ ಸೌಕರ್ಯಗಳನ್ನ ಒದಗಿಸುವಂತೆ ರಾಧಾ ಮೋಹನ್ ದಾಸ್ ಅವರ ಬಳಿ ಮನವಿ ಮಾಡಲು ಬಂದಿದ್ದಾರೆ.
ಈ ವೇಳೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಮಹಿಳೆ ಮನವಿ ಮಾಡಿದ ಬಳಿಕ ಮಹಿಳೆಯನ್ನು ನಿಮಗೆ ಎಷ್ಟು ಮಕ್ಕಳಿದೆ ಎಂದು ದಾಸ್ ಕೇಳಿದ್ದಾರೆ. ನಂತರ ಮಹಿಳೆ ಇಬ್ಬರು ಮಕ್ಕಳಿದ್ದಾರೆಂದು ಹೇಳಿದ್ದಾರೆ.
ಇಬ್ಬರೂ ಮಕ್ಕಳು ಒಟ್ಟಿಗೆ ಹುಟ್ಟಿದರೇ ಎಂದು ಮತ್ತೆ ದಾಸ್ ಮರು ಪ್ರಶ್ನಿಸಿದ್ದಾರೆ. ಇದಕ್ಕೆ ಮಹಿಳೆ ಇಲ್ಲ ಎಂದಿದ್ದಾರೆ. ನಂತರ ಕೆಟ್ಟ ವರ್ತನೆಯನ್ನು ತೋರಿರುವ ಶಾಸಕ, ಇಬ್ಬರು ಮಕ್ಕಳು ಒಟ್ಟಿಗೆ ಹುಟ್ಟಲಿಲ್ಲ ಎಂದಾದ ಮೇಲೆ, ಒಮ್ಮೆಲೆ ಎಲ್ಲಾ ಆಗ್ರಹಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಹೇಳಿದ್ದಾರೆ.ರಾಧಾ ಮೋಹನ್ ದಾಸ್ ಅವರ ಈ ಹೇಳಿಕೆಗೆ ಇದೀಗ ತೀವ್ರ ವಿರೋಧಗಳು ವ್ಯಕ್ತವಾಗತೊಡಗಿವೆ.
ಹೇಳಿಕೆ ಸಂಬಂಧ ಸ್ಪಷ್ಟನೆ ನೀಡಿರುವ ಮೋಹನ್ ದಾಸ್ ಅವರು, ನನಗೆ ಐದು ಮಕ್ಕಳಿದ್ದರೆ, ಒಂದರ ನಂತರ ಒಂದರಂತೆಯೇ ಮಾತ್ರವೇ ಮಗು ಜನ್ಮ ಪಡೆದಿರುತ್ತದೆ. ಒಟ್ಟಿಗೆ ಐದು ಮಕ್ಕಳು ಹುಟ್ಟಲು ಸಾಧ್ಯವಿಲ್ಲ. ಕೆಲ ಹೇಳಿಕೆಗಳನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಕು. ಒಬ್ಬರ ಜೀವನ ಹಾಳಾಗುವಂತೆ ಮಾಡಬಾರದು. ಒಂದು ವೇಳೆ ನಾನು ಪ್ರತಿಯೊಂದನ್ನು ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದರೆ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ನೋವುಗಳು ಎದುರಾಗುತ್ತದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ ನಡು ರಸ್ತೆಯಲ್ಲೇ ಕಣ್ಣೀರು ಹಾಕಿಸಿದ್ದರು,
ಕೊಯಿಲ್ವಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಗುಂಪೊಂದು ರಸ್ತೆ ಬಂದ್ ಮಾಡಿತ್ತು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಈ ವಾಗ್ವಾದದ ಮಧ್ಯೆ ಕೆಲವು ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಘಟನೆ ಬಳಿಕ ಸ್ಥಳಕ್ಕೆ ಬಂದಿದ್ದ ಅಗರವಾಲ್ ಅವರು ಪೊಲೀಸರ ಕ್ರಮ ಖಂಡಿಸಿದ್ದರು. ಅಲ್ಲದೆ, ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಎಂಬುವವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಬಾಯಿ ಮುಚ್ಚಿಕೊಂಡಿರಿ, ಏನೂ ಹೇಳಲು ಬರಬೇಡಿ. ನಿಮ್ಮ ಇತಿ ಮಿತಿ ಮೀರಬೇಡಿ ಎಂದು ಬೆರಳು ತೋರುತ್ತಾ ಮಹಿಳಾ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ಗದರಿದ್ದರು. ಈ ವೇಳೆ ಶಾಸಕರಿಗೆ ಉತ್ತರ ನೀಡುತ್ತಾ ನಿಗಮ್ ಅವರು ಸಾರ್ವಜನಿಕವಾಗಿಯೇ ಕಣ್ಣೀರು ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics