ತಿರುವನಂತಪುರಂ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಹಾಗೂ ಗೋ ಮಾರಾಟ ಕಾಯ್ದೆಯನ್ನು ವಿರೋಧಿಸಲು ಎಡಪಕ್ಷ ಸಿಪಿಐ(ಎಂ) ನೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ಕೇರಳ ಕಾಂಗ್ರೆಸ್ ಘೋಷಿಸಿದೆ.
ರಾಜ್ಯಪಾಲರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮನವಿ ಸಲ್ಲಿಕೆ ಮಾಡಿದ ನಂತರ ಮಾತನಾಡಿರುವ ಕಾಂಗ್ರೆಸ್ ನ ಅಧ್ಯಕ್ಷ ಎಂಎಂ ಹಾಸನ್, ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಡರಂಗದ ಪಕ್ಷಕ್ಕೂ ನಮಗೂ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ಅಗತ್ಯ ಉಂಟಾದರೆ ಗೋಹತ್ಯೆ ನಿಷೇಧವನ್ನು ವಿರೋಧಿಸುವುದಕ್ಕೆ ನಾವು ಎಡಪಕ್ಷದವರೊಂದಿಗೆ ಕೈ ಜೋಡಿಸಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಡೆಯನ್ನು ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವ ತಂತ್ರ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷರು, ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಹುನ್ನಾರವಾಗಿದೆ. ಇದರ ವಿರುದ್ಧ ವ್ಯಾಪಕ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋಮಾರಾಟ ಹಾಗೂ ಗೋಹತ್ಯೆ ನಿಷೆಧ ಕಾಯ್ದೆಗಳನ್ನು ವಿರೋಧಿಸಿ ಮೇ. 29 ರಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಅಷ್ಟೇ ಅಲ್ಲದೇ ಸಿಎಂ ಪಿಣರಾಯಿ ವಿಜಯ್ ಗೆ ಈ ಬಗ್ಗೆ ಸರ್ವಪಕ್ಷ ಸಭೆ ಕರೆಯುವಂತೆಯೂ ಕಾಂಗ್ರೆಸ್ ಒತ್ತಾಯಿಸಿದೆ.