ಎನ್ ಟಿಪಿಸಿ ವಿದ್ಯುತ್ ಸ್ಥಾವರದ ಬಾಯ್ಲರ್ ಸ್ಫೋಟ
ನವದೆಹಲಿ: ರಾಯ್ ಬರೇಲಿಯ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರ ಎನ್ ಟಿಪಿಸಿಯ ಉಂಚಾಹರ್ ಘಟಕದಲ್ಲಿ ಸಂಭವಿಸಿದ್ದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ.
26 ಜನರ ಸಾವಿಗೆ ಕಾರಣವಾದ ಬಾಯ್ಲರ್ ಸ್ಫೋಟದ ಬಗ್ಗೆ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ವಿಸ್ತೃತ ವರದಿ ನೀಡುವಂತೆ ಎನ್ ಎಚ್ ಆರ್ ಸಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದು, ಇಂತಹ ದುರಂತಗಳು ಮತ್ತೆ ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ನಿನ್ನೆ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಬಾಯ್ಲರ್ ಸ್ಫೋಟಗೊಂಡ ಪರಿಣಾಮ 26 ಮಂದಿ ಮೃತಪಟ್ಟಿದ್ದು, 50 ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.