ನವದೆಹಲಿ: ನಿಷೆಧಿತ 500, 1000 ರೂಪಾಯಿ ನೋಟುಗಳನ್ನು ಕಾರಣಾಂತರಗಳಿಂದ ಬ್ಯಾಂಕ್ ನಾಲ್ಲಿ ಜಮಾ ಮಾಡಲು ಸಾಧ್ಯವಾಗದವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿದೆ.
ಹಳೆಯ 500, 1000 ನೋಟುಗಳನ್ನು ಮತ್ತೆ ಬ್ಯಾಂಕ್ ಗೆ ಜಮಾ ಮಾಡಲು ಅನುಮತಿ ಕೇಳಿ ಸಲ್ಲಿಸಲಾಗಿದ್ದ 14 ಅರ್ಜಿಗಳನ್ನು ವಿಲೇವಾರಿ ಮಾಡಿರುವ ಕೋರ್ಟ್, ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ಧಾರದ ಸಿಂಧುತ್ವವನ್ನು ನಿರ್ಧರಿಸುವ ಸಾಂವಿಧಾನಿಕ ಪೀಠವೇ ಈ ವಿಷಯವಾಗಿಯೂ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ, ನ್ಯಾ.ಎಎಂ ಖನ್ವಿಲ್ಕರ್, ನ್ಯಾ.ಡಿವೈ ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.
ಇನ್ನು ಹಳೆಯ ನೋಟುಗಳನ್ನು ಹೊಂದಿರುವ ಎನ್ಆರ್ ಐ ಗಳು ಹಾಗೂ ಕಾರಣಾಂತರಗಳಿಂದ ಜಮಾ ಮಾಡದವರ ವಿರುದ್ಧ ಕೇಂದ್ರ ಸರ್ಕಾರ ಕ್ರಿಮಿನಲ್ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಟಾರ್ನಿ ಜನರಲ್ ಸುಪ್ರೀಂ ಕೋಟ್ ಗೆ ಸ್ಪಷ್ಟಪಡಿಸಿದ್ದಾರೆ.
ನೋಟು ನಿಷೇಧದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ 2016 ರ ಡಿಸೆಂಬರ್ 16 ರಂದು ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿತ್ತು. ಈಗ ಜಮಾ ಮಾಡಲು ಅನುಮತಿ ಕೇಳಿ ಸಲ್ಲಿಸಲಾಗಿದ್ದ 14 ಅರ್ಜಿಗಳ ಬಗ್ಗೆಯೂ ಸಾಂವಿಧಾನಿಕ ಪೀಠವೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.