ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚೆನ್ನೈಗೆ ಆಗಮಿಸುತ್ತಿದ್ದು, ಈ ವಿಚಾರ ಇದೀಗ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರ ನಿಧನದ ಸಂದರ್ಭದಲ್ಲಿ ತಮಿಳುನಾಡಿಗೆ ಆಗಮಿಸಿದ್ದ ಪ್ರಧಾನಿ ಮೋದಿ, ಜಯಾ ಬೆಂಬಲಿಗರಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದರು. ಎಐಎಡಿಎಂಕೆ ನಾಯಕರು ಪ್ರಧಾನಿ ತಮ್ಮೊಂದಿಗೆ ಇದ್ದಾರೆ ಎಂದು ಬೀಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಶಾಕಿಂಗ್ ನ್ಯೂಸ್ ಎದುರಾಗಿದೆ.
ಇಂದು ವರ್ನಾಕ್ಯುಲರ್ ದೈನಿಕದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸುತ್ತಿದ್ದು, ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದು ಎಐಎಡಿಎಂಕೆ ಸದಸ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೇ ಸಂದರ್ಭದಲ್ಲಿ ನಾಳೆ ಸುಪ್ರೀಂ ಕೋರ್ಟ್ ನಲ್ಲಿ 2ಜಿ ಹಗರಣದ ವಿಚಾರಣೆ ಇದ್ದು, ಇದೂ ಕೂಡ ಪ್ರಧಾನಿ ಮೋದಿ-ಎಂ ಕರುಣಾನಿಧಿ ಭೇಟಿ ಕುರಿತು ಕುತೂಹಲ ಹೆಚ್ಚಿಸಿದೆ.
2ಜಿ ಹಗರಣದಲ್ಲಿ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ, ಸಂಬಂಧಿ ಎ ರಾಜಾ ಸೇರಿದಂತೆ ಕರುಣಾನಿಧಿ ಅವರ ಬಹುತೇಕ ಕುಟುಂಬ ಸದಸ್ಯರು ಭಾಗಿಯಾಗಿದ್ದು, ಈ ಬಗ್ಗೆ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ.
ಇನ್ನು ಪ್ರಧಾನಿ ಮೋದಿ-ಕರುಣಾನಿಧಿ ಭೇಟಿ ಕುರಿತಂತೆ ತಮಿಳುನಾಡು ಬಿಜೆಪಿ ಘಟಕ ಹಾಗೂ ಡಿಎಂಕೆ ಪಕ್ಷಗಳ ವಕ್ತಾರರು ಸ್ಪಷ್ಟಪಡಿಸಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ್ ರಾವ್ ಅವರೂ ಕೂಡ ಭೇಟಿ ಕುರಿತು ಟ್ವೀಟ್ ಮಾಡಿದ್ದಾರೆ. ಚೆನ್ನೈನ ಗೋಪಾಲಪುರಂನಲ್ಲಿರುವ ಎಂ ಕರುಣಾನಿಧಿ ಅವರ ನಿವಾಸಕ್ಕೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12.30ಕ್ಕೆ ಆಗಮಿ ಉಭಯ ಕುಶಲೋಪರಿ ವಿಚಾರಿಸಲಿದ್ದಾರೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಿ ಕಚೇರಿಯ ಹಿರಿಯ ಅಧಿಕಾರಿ ಡಾ.ಟಿವಿ ಸೋಮನಾಥನ್ ಅವರ ಮಗಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜಾ ಅಣ್ಣಾಮಲೈ ಪುರಂ ನಲ್ಲಿ ವಿವಾಹ ಕಾರ್ಯಕ್ರಮ ನೆರವೇರುತ್ತಿದೆ.
2016ರಿಂದಲೂ ಅನಾರೋಗ್ಯಕ್ಕೀಡಾಗಿರುವ ಕರುಣಾನಿಧಿ ಅವರು, ಕಳೆದ ಡಿಸೆಂಬರ್ ನಲ್ಲಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದ ಕರುಣಾನಿಧಿ ಅವರು ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.