ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ
ನವದೆಹಲಿ: ತೆಹಲ್ಕಾಗೆ ಹಣಕಾಸು ಹೂಡಿದ ಖಾಸಗಿ ಸಂಸ್ಥೆ ಫಸ್ಟ್ ಗ್ಲೋಬಲ್ ಕಿರುಕುಳ ನೀಡುತ್ತಿದ್ದ ಆರೋಪಗಳಿಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನೀಡಿದ್ದ ಪ್ರತಿಕ್ರಿಯೆನ್ನು ಬಿಡುಗಡೆ ಮಾಡುವಂತೆ ಮಾಧ್ಯಮಗಳಿಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸಲಹೆ ನೀಡಿದ್ದಾರೆ.
ತೆಹಲ್ಕಾ ಮ್ಯಾಗಜಿನ್ ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ರಕ್ಷಣಾ ವಲಯದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ಇದರಿಂದ ಅಂದಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಬಂಗಾರು ಲಕ್ಷ್ಮಣ್ ಲಂಚ ಪಡೆಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಅವರು ಆರೋಪಿ ಎಂದು ತೀರ್ಮಾನಿಸಲಾಯಿತು.
ಈ ಅಕ್ರಮ ಬಯಲಿಗೆ ಬಂದ ನಂತರ ತನಿಖಾ ಸಂಸ್ಥೆಗಳು ಫಸ್ಟ್ ಗ್ಲೋಬಲ್, ದೇವಿನಾ ಮೆಹ್ರಾ ಮತ್ತು ಶಂಕರ್ ಶರ್ಮ ವಿರುದ್ಧ ಹಲವು ಕೇಸುಗಳನ್ನು ದಾಖಲಿಸಿದ್ದವು.
2004ರಲ್ಲಿ ಯುಪಿಎ ಮೈತ್ರಿಕೂಟ ಸರ್ಕಾರ ರಚಿಸಿದ ನಂತರ ಅಂದಿನ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದ ಮೆಹ್ರಾ ಮತ್ತು ಶರ್ಮ ಏಜೆನ್ಸಿಗಳು ಹಿಂಸೆಯನ್ನು ಮುಂದುವರಿಸುತ್ತಿದ್ದು, ಅದನ್ನು ಬಗೆಹರಿಸುವಂತೆ ಕೋರಿದ್ದರು.
ಫಸ್ಟ್ ಗ್ಲೋಬಲ್ಸ್ ಪತ್ರವನ್ನು ಸೇರಿಸಿ ಕಚೇರಿಯ ಅಧಿಕೃತ ಪತ್ರದೊಂದಿಗೆ ಅಂದಿನ ಹಣಕಾಸು ಸಚಿವ ಚಿದಂಬರಂ ಅವರಿಗೆ ಪತ್ರ ಬರೆದ ಸೋನಿಯಾ ಗಾಂಧಿ ಈ ವಿಷಯವನ್ನು ಆದ್ಯತೆ ಮೇರೆಗೆ ಪರಿಗಣಿಸುವಂತೆ ಮತ್ತು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು ಎಂದು ಚಿದಂಬಂರಂ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಚಿದಂಬರಂ, ಹೇಳಿಕೆ ಬಿಡುಗಡೆ ಮಾಡಿ ಸೋನಿಯಾ ಗಾಂಧಿಯವರು ತಮಗೆ ಬರೆದ ಪತ್ರದ ಪ್ರತಿಯೊಂದನ್ನು ತೋರಿಸಿದ್ದಾರೆ. ಸೋನಿಯಾ ಗಾಂಧಿಯವರು ಬರೆದ ಪತ್ರಕ್ಕೆ ನಾನು ಉತ್ತರ ನೀಡಿದ್ದೆೇನೆ. ಹಣಕಾಸು ಸಚಿವಾಲಯದ ಭಾಗವಾಗಿ ನನಗೆ ಒದಗಿಸಿದ ಮಾಹಿತಿಗಳ ಆಧಾರದ ಮೇಲೆ ನಾನು ಪ್ರತಿಕ್ರಿಯೆ ನೀಡಿದ್ದೆನು. ಸೋನಿಯಾ ಗಾಂಧಿಯವರ ಪತ್ರ ಮತ್ತು ಅದಕ್ಕೆ ನನ್ನ ಪ್ರತಿಕ್ರಿಯೆಯನ್ನು ಒಟ್ಟಿಗೆ ಓದಬೇಕು. ಸೋನಿಯಾ ಗಾಂಧಿಯವರಿಗೆ ನಾನು ಬರೆದ ಪ್ರತಿಕ್ರಿಯೆಯನ್ನು ಸರ್ಕಾರ ಬಿಡುಗಡೆ ಮಾಡುವಂತೆ ಮಾಧ್ಯಮಗಳು ಹೇಳಬೇಕು ಎಂದು ನಾನು ಸಲಹೆ ಮಾಡುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ತಿಳಿಸಿದ್ದಾರೆ.