ಚೆನ್ನೈ: ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬಳು ಆಸ್ತಿ ವಿಚಾರಕ್ಕೆ ಜಗಳ ಮಾಡಿ ಪ್ರಿಯಕರನ ನಾಲ್ಕು ವರ್ಷದ ಪುತ್ರಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ಚೆನ್ನೈ ಹೊರವಲಯದ ಕುಂದ್ರತೂರ್'ನಲ್ಲಿ ಭಾನುವಾರ ಸಂಜೆ ನಡೆದಿದೆ.
ಆಶಾ (30) ಬಾಲಕಿಯನ್ನು ಹತ್ಯೆ ಮಾಡಿದ ಗರ್ಭಿಣಿ ಮಹಿಳೆಯಾಗಿದ್ದಾಳೆ. ಆಸ್ತಿ ವಿಚಾರಕ್ಕೆ ಪ್ರಿಯಕರನೊಂದಿಗೆ ಜಗಳ ಮಾಡಿದ್ದ ಆಶಾ ನಿನ್ನೆ ಸಂಜೆ ಆತನ ಪುತ್ರಿ ಗೋಷಿಕಾಳ ತಲೆಯನ್ನು ನೀರು ತುಂಬಿದ ಬಕೆಟ್ ನಲ್ಲಿ ಹಾಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ಗೋಷಿಕಾ ತಂದೆ ಧರ್ಮಲಿಂಗಂ ಆಶಾಳೊಂದಿಗೆ ಹಲವು ತಿಂಗಳಿನಿಂದಲೂ ಅಕ್ರಮ ಸಂಬಂಧ ಹೊಂದಿದ್ದ. ಇತ್ತೀಚೆಗಷ್ಟೇ ಆಶಾಗೆ ತಾನು ಗರ್ಭಿಣಿ ಎಂಬ ವಿಚಾರ ತಿಳಿದಿದೆ. ಬಳಿಕ ಆಶಾ ಹಾಗೂ ಧರ್ಮಲಿಂಗಂ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಜಗಳವಾಗಿದೆ. ಮಾತಿನ ಚಕಮಕಿ ವೇಳೆ ಧರ್ಮಲಿಂಗಂ ತನ್ನೆಲ್ಲಾ ಆಸ್ತಿಯನ್ನು ಪುತ್ರಿ ಗೋಷಿಕಾಗೆ ನೀಡುವುದಾಗಿ ಹೇಳಿದ್ದಾನೆ. ಇದರಿಂದ ತೀವ್ರವಾಗಿ ಕೆಂಡಾಮಂಡಲಗೊಂಡ ಆಶಾ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆಂದು ತಿಳಿದುಬಂದಿದೆ.
5 ವರ್ಷಗಳ ಹಿಂದೆ ಧರ್ಮಲಿಂಗಂ ಜಯಂತಿ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ದಂಪಂತಿಗಳಿಗೆ ಗೋಷಿಕಾ ಎಂಬ ಪುತ್ರಿಯಿದ್ದಳು. ಕೌಟುಂಬಿಕ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ 2 ವರ್ಷಗಳ ಹಿಂದೆ ದಂಪತಿಗಳು ದೂರಾಗಿದ್ದರು. ಇದರಂತೆ ಗೋಷಿಕಾ ತಾಯಿಯೊಂದಿಗೆ ಇದ್ದಳು. ವಾರಾಂತ್ಯದಲ್ಲಿ ಮಾತ್ರ ತಂದೆಯ ಮನೆಗೆ ಬರುತ್ತಿದ್ದಳು.
ವಾರಾಂತ್ಯ ಹಿನ್ನಲೆಯಲ್ಲಿ ನಿನ್ನೆ ಗೋಷಿಕಾ ತಂದೆ ಧರ್ಮಲಿಂಗಂ ಮನೆಗೆ ಬಂದಿದ್ದಾಳೆ. ಧರ್ಮಲಿಂಗಂ ಆಶಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಶಾ ಧರ್ಮಲಿಂಗಂ ಮನೆಯಲ್ಲಿಯೇ ಇದ್ದಳು. ಗೋಶಿಕಾ ಮನೆಗೆ ಬಂದ ಬಳಿಕ ಧರ್ಮಲಿಂಗಂ ಕೆಲಸಕ್ಕೆಂದು ಸಂಜೆ 7 ಗಂಟೆ ಸುಮಾರಿಗೆ ಹೊರಗೆ ಹೋಗಿದ್ದಾನೆ. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದುದ್ದರಿಂದ ಆಶಾ ಬಾಲಕಿಯನ್ನು ಹತ್ಯೆ ಮಾಡಿದ್ದಾಳೆ.
ಕೆಲಸ ಮುಗಿಸಿಕೊಂಡು ಧರ್ಮಲಿಂಗಂ ಮನೆಗೆ ಬಂದ ವೇಳೆ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಬಳಿಕ ಪರೀಕ್ಷೆ ನಡೆಸಿರುವ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಶಾಳನ್ನು ಬಂಧನಕ್ಕೊಳಪಡಿಸಿದ್ದು, ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.