ದೇಶ

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: ಯೋಧ ಹುತಾತ್ಮ, ಓರ್ವ ಉಗ್ರನ ಹತ್ಯೆ

Lingaraj Badiger
ಕುಲ್ಗಾಮ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್ ಕೌಂಟರ್ ನಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ಜಿಲ್ಲೆ ನೌಗಾಮ್ ಕುಂದ್, ಖ್ವಾಜಿಗುಂದ್ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿಶೇಷ ಕಾರ್ಯಾಚರಣಾ ಪಡೆ ಹಾಗೂ ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಅಡಗಿ ಕುಳಿತಿರುವ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಉಗ್ರರ ವಿರುದ್ಧ ಇದೀಗ ಸೇನಾಪಡೆಗಳು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈ ನಡುವೆ ತ್ರಾಲ್'ನ ಅವಂತಿಪೊರಾ ಜಿಲ್ಲೆಯ ಲಾಮ್ ಅರಣ್ಯ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, 42 ರಾಷ್ಟ್ರೀಯ ರೈಫಲ್ಸ್ ಪಡೆ ಭಾರೀ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 
SCROLL FOR NEXT