ಚಂಡೀಘಡ: ಮಹತ್ವದ ಬೆಳವಣಿಗೆಯಲ್ಲಿ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ಕೊಲೆ ಪ್ರಕರಣ ಸಂಬಂಧ ಈ ಹಿಂದೆ ತಪ್ಪೊಪ್ಪಿಕೊಂಡಿದ್ದ 9ನೇ ತರಗತಿ ವಿದ್ಯಾರ್ಥಿ ಇದೀಗ ತನ್ನ ಹೇಳಿಕೆಯಿಂದ ಉಲ್ಟಾ ಹೊಡೆದಿದ್ದು, ತನಿಖಾಧಿಕಾರಿಗಳು ಬಲವಂತವಾಗಿ ಆ ರೀತಿ ಹೇಳುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾನೆ.
ಪ್ರಸ್ತತ ಕೊಲೆ ಪ್ರಕರಣ ಸಂಬಂಧ ಬಾಲಾಪರಾಧಿ ನ್ಯಾಯಾಲಯದ ಸುಪರ್ದಿಯಲ್ಲಿರುವ 9ನೇ ತರಗತಿ ವಿದ್ಯಾರ್ಥಿ ನ್ಯಾಯಾಧೀಶರ ಮುಂದೆ ಈ ರೀತಿ ಹೇಳಿಕೆ ನೀಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖಾಧಿಕಾರಿಗಳು ಬಲವಂತವಾಗಿ ಈ ರೀತಿ ಹೇಳುವಂತೆ ಬೆದರಿಕೆ ಹಾಕಿದ್ದರು, ಕಸ್ಟಡಿಯಲ್ಲಿರುವಾದ ತನಗೆ ಮನಸೋ ಇಚ್ಛೆ ಥಳಿಸಿ ನನ್ನಿಂದ ಬಲವಂತವಾಗಿ ಹೇಳಿಕೆ ಪಡೆದುಕೊಂಡಿದ್ದರು ಎಂದು 9ನೇ ತರಗತಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ಆದರೆ ಈ ಬಗ್ಗೆ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.
ಪ್ರಸ್ತುತ ಆರೋಪಿ ವಿದ್ಯಾರ್ಥಿಯನ್ನು ಫರಿದಾಬಾದ್ ನಲ್ಲಿರುವ ಬಾಲಾಪರಾಧಿಗಳ ವೀಕ್ಷಣಾಲಾಯದಲ್ಲಿ ಇರಿಸಲಾಗಿದ್ದು, ಆತ ನೀಡಿರುವ ಹೇಳಿಕೆಯ ಸತ್ಯಾಸತ್ಯತೆಯ ಕುರಿತು ಪರಿಶೀಲನೆ ನಡೆಸುವಂತ ತಜ್ಞರಿಗೆ ಸಲಹೆ ನೀಡಲಾಗಿದೆ. ಅಂತೆಯೇ ನವೆಂಬರ್ 22ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.