ದೇಶ

ಭಾರತದ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸುಧಾರಿಸಬೇಕಿದೆ: ಬಿಲ್ ಗೇಟ್ಸ್

Srinivasamurthy VN
ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆ ಪ್ರಸ್ತುತ ಇರುವ ಸ್ಥಿತಿಗಿಂತ ಗಣನೀಯ ಪ್ರಮಾಣದಲ್ಲಿ ಸುಧಾರಿಸಬೇಕಾದ ಅಗತ್ಯವಿದೆ ಎಂದು ಐಟಿ ದಿಗ್ಗಜ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಬಿಲ್ ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ದೈನಿಕವೊಂದರ ಅತಿಥಿ ಸಂಪಾದಕರಾಗಿ ಆಗಮಿಸಿದ್ದ ಐಟಿ ದಿಗ್ಗಜ ಬಿಲ್ ಗೇಟ್ಸ್, ಭಾರತದ ಸಾರ್ವಜನಿಕ ಆರೋಗ್ಯ, ತಂತ್ರಜ್ಞಾನ ಹಾಗೂ ವಿಶ್ವವನ್ನು ಬದಲಿಸಬಹುದಾದ ತಮ್ಮ ಕಲ್ಪನೆಗಳನ್ನು ಹಂಚಿಕೊಂಡರು. ಭಾರತದ  ಸಾಧನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಭಾರತದಲ್ಲಿ ಹಲವು ವಿದ್ಯಮಾನಗಳು ಧನಾತ್ಮಕವಾಗಿಯೇ ಇದೆ. ಆದರೆ ದೊಡ್ಡ ನಿರಾಸೆ ಎಂದರೆ ಭಾರತದ ಶಿಕ್ಷಣ ವ್ಯವಸ್ಥೆ. ಇದು ಇನ್ನಷ್ಟು ಉತ್ತಮವಾಗಬೇಕು. ಇದರ  ವಿಮರ್ಶೆಗೆ ನಾನು ಹೋಗುವುದಿಲ್ಲ. ಆದರೆ ಈ ಬಗ್ಗೆ ಉನ್ನತ ನಿರೀಕ್ಷೆಯನ್ನು ಸೃಷ್ಟಿಸಬೇಕಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆ ಈಗಿರುವ ಪರಿಸ್ಥಿತಿಗಿಂತ ಸಾಕಷ್ಟು ಸುಧಾರಿಸಬೇಕಿದೆ ಎಂದು ಉತ್ತರಿಸಿದರು. ಅಂತೆಯೇ ಗೇಟ್ಸ್‌  ಫೌಂಡೇಷನ್ ಆರೋಗ್ಯ ಸೇವೆ ಹೊರತು ಪಡಿಸಿ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಮುಂದಾಗಲಿದೆಯೇ ಎಂಬ ಪ್ರಶ್ನೆಗೆ "ನಾವೇ ಎಲ್ಲ ಮಾಡಲು ಸಾಧ್ಯವಿಲ್ಲ. ಅನೇಕ ಭಾರತೀಯರು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನೀಡುತ್ತಿರುವ ಮಹತ್ವ  ನೋಡುತ್ತಿದ್ದರೆ ಖುಷಿಯಾಗುತ್ತಿದೆ" ಎಂದರು.
ಭಾರತದ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಯೋಜನೆ ಬಗ್ಗೆ ಗಮನ ಸೆಳೆದಾಗ, "ಶೌಚಾಲಯಗಳನ್ನು ನಿರ್ಮಿಸುವುದು ಬ್ಯಾಂಕ್ ಖಾತೆ ತೆರೆದಂತೆ. ಆದರೆ ವಾಸ್ತವ ಸವಾಲು ಇರುವುದು ಜನ ಅದನ್ನು ಬಳಸುವಂತೆ ಮಾಡುವುದು.  ಭಾರತದ ಕೆಲವು ಭಾಗಗಳಲ್ಲಿ ಇದು ಅದ್ಭುತ ಫಲಿತಾಂಶ ನೀಡಿದೆ. ಕೆಲವೆಡೆ ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಮೊದಲ ಹಂತದಲ್ಲಿ ಜನರ ಮನೋಪ್ರವೃತ್ತಿಯಲ್ಲಿ ಬದಲಾವಣೆಯಾಗಬೇಕು. ಯಾರು ಕೂಡಾ ಬಯಲು ಶೌಚ  ಮಾಡಬಾರದು ಎಂಬ ಭಾವನೆ ಗ್ರಾಮೀಣ ಜನರಲ್ಲಿ ದಟ್ಟವಾಗಬೇಕು. ಸ್ವಚ್ಛ ಭಾರತ ಅಭಿಯಾನದಲ್ಲಿ ಸರ್ಕಾರದ ಜತೆ ಕೈಜೋಡಿಸಿರುವ ನಮ್ಮ ಸಂಸ್ಥೆ ಕಟ್ಟುವ ಶೌಚಾಲಯ ಬಳಕೆಗೆ ಯೋಗ್ಯವಾಗಿರುವ ಗುಣಮಟ್ಟವನ್ನು  ಹೊಂದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಭಾಯಿಸುತ್ತಿದೆ ಎಂದು ವಿವರಿಸಿದರು.
ಎರಡು ದಶಕಗಳ ಕಾಲ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದ ಗೇಟ್ಸ್ ಅವರ ಸ್ಥಾನವನ್ನು ಇತ್ತೀಚೆಗೆ ಅಮೇಜಾನ್ ಸಿಇಒ ಜೆಫ್ ಬೆಜೋಸ್ ಆಕ್ರಮಿಸಿಕೊಂಡಿದ್ದರು.
SCROLL FOR NEXT