ನವದೆಹಲಿ: ಭಾರತೀಯ ಉನ್ನತ ಮಟ್ಟದ ಅಧಿಕಾರಿಗಳು ರಹಸ್ಯವಾಗಿ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ಮಾಹಿತಿ ಮೇಲೆ ಚೀನಾ ಮೂಲದ ಹ್ಯಾಕರ್ ಗಳು ದಾಳಿ ಮಾಡಿ ಮಹತ್ವದ ರಹಸ್ಯ ಮಾಹಿತಿಗಳನ್ನು ಕದ್ದಿದ್ದಾರೆ ಎಂಹ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಕಳೆದ ತಿಂಗಳು ನಡೆದ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಗೌಪ್ಯ ವಿಡಿಯೋ ಕಾನ್ಫರೆನ್ಸ್ ಅನ್ನು ಚೀನಾ ಮೂಲದ ಹ್ಯಾಕರ್ ಗಳು ಹ್ಯಾಕ್ ಮಾಡಿದ್ದು, ಸ್ಯಾಟಲೈಟ್ ಮೂಲಕ ಸಂಪರ್ಕ ಪಡೆದಿದ್ದ ಲಿಂಕ್ ಅನ್ನೇ ಹ್ಯಾಕರ್ ಗಳು ಹ್ಯಾಕ್ ಮಾಡಿ ವಿಡಿಯೋ ಕಾನ್ಫರೆನ್ಸ್ ಮಾಹಿತಿ ಕದ್ದಿದ್ದಾರೆ. ಸುಮಾರು 4-5 ನಿಮಿಷಗಳ ಕಾಲ ಸ್ಯಾಟಲೈಟ್ ವಿಡಿಯೋ ಕಾನ್ಫರೆನ್ಸ್ ಲಿಂಕ್ ಹ್ಯಾಕರ್ ಗಳ ನಿಯಂತ್ರಣದಲ್ಲೇ ಇತ್ತು ಎನ್ನುವ ಸ್ಫೋಟಕ ಮಾಹಿತಿ ಕೂಡ ಲಭ್ಯವಾಗಿದೆ.
ದೇಶದ ಅತ್ಯಂತ ಅತ್ಯಾಧುನಿಕ ಮತ್ತು ತೀರಾ ಗೌಪ್ಯವಾಗಿರಿಸಿದ್ದ ಸ್ಯಾಟಲೈಟ್ ಲಿಂಕ್ ಅನ್ನೇ ಹ್ಯಾಕರ್ ಗಳು ಹ್ಯಾಕ್ ಮಾಡಿರುವುದು ಇದೀಗ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಂತೆಯೇ ದೇಶದ ಸೈಬರ್ ಭದ್ರತೆ ಕುರಿತು ಗಂಭೀರ ಶಂಕೆ ಮೂಡುತ್ತಿದೆ. ವಿಡಿಯೋ ಚಾಟ್ ಸೋರಿಕೆ ಸಂಬಂಧ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಗಳು ಇದೀಗ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ತನ್ನ ವರದಿಯಲ್ಲಿ ಗುಪ್ತಚರ ಇಲಾಖೆ ಸೈಬರ್ ಭದ್ರತೆ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಪ್ರಧಾನಿ ಮೋದಿ ಡಿಜಟಲ್ ಇಂಡಿಯಾ ಕನಸಿಗೆ ದೊಡ್ಡ ಬೆದರಿಕೆ
ಇನ್ನು ಪ್ರಸ್ತುತ ಚೀನಾ ಹ್ಯಾಕರ್ ಗಳ ದಾಳಿ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಟಲ್ ಇಂಡಿಯಾ ಕನಸಿಗೆ ದೊಡ್ಡ ಬೆದರಿಕೆ ಎನ್ನಲಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಿ ಕಚೇರಿ 2018ರ ವೇಳೆಗೆ ಕೇಂದ್ರ ಸರ್ಕಾರದ ಎಲ್ಲ ಸವಲತ್ತುಗಳು, ಸಬ್ಸಿಡಿ ಪಾವತಿಗಳು, ಪಿಂಚಣಿ ಮತ್ತು ಇತರೆ ಆರ್ಥಿಕ ಸವಲತ್ತುಗಳು ಜನಧನ್ ಖಾತೆ ಮೂಲಕವೇ ನಡೆಯಬೇಕು ಎಂದು ಈ ಹಿಂದೆ ಹೇಳಿತ್ತು. ಅಲ್ಲದೆ ಕೇಂದ್ರ ಸುಮಾರು 4000 ಸೇವೆಗಳನ್ನು ಇ-ಸೇವೆಗಳ ಅಡಿಗೆ ಸೇರಿಸಲಾಗಿತ್ತು. ಸರ್ಕಾರದ ಮೂಲಗಳ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತೀ ತಿಂಗಳು 60 ಕೋಟಿ ವಿವಿಧ ಇ-ಸೇವೆಗಳನ್ನು ನೀಡುತ್ತಿವೆ. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವೆಬ್ ಸೈಟ್ ಗಳು ಕೂಡ ಸೇರಿದ್ದು, ಸುಮಾರು 8000 ವೆಬ್ ಪೋರ್ಟಲ್ ಗಳು ಈ ಇ-ಸೇವೆಗಳನ್ನು ನಿಯಂತ್ರಿಸುತ್ತಿವೆ.
ಅಂತೆಯೇ ಭವಿಷ್ಯದಲ್ಲಿ ಅಂದರೆ 2018ರ ವೇಳೆಗೆ ಪ್ರಸ್ತುತ ಪ್ರಜೆಗಳಿಗೆ ದೊರೆಯುತ್ತಿರುವ ಸರ್ಕಾರಿ ಸೇವೆಗಳು ಮೊಬೈಲ್ ಆ್ಯಪ್ ಮೂಲಕ ದೊರೆಯಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಸುಮಾರು 2000 ಆ್ಯಪ್ ಗಳ ನಿರ್ಮಾಣದ ಗುರಿ ಹೊಂದಿದೆ. ಹೀಗಿರುವಾಗ ಚೀನಾ ಹ್ಯಾಕರ್ ಗಳ ದಾಳಿ ದೇಶದ ಸರ್ಕಾರಿ ವ್ಯವಸ್ಥೆಯನ್ನೇ ಬುಡ ಮೇಲು ಮಾಡುವ ಬೆದರಿಕೆ ತಂದೊಡ್ಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸೈಬರ್ ಭದ್ರತೆ ಪರಿಶೀಲನೆಗೆ ಕ್ರಮ
ಇನ್ನು ಅತ್ತ ಚೀನಾ ಹ್ಯಾಕರ್ ಗಳ ದಾಳಿ ಬೆನ್ನಲ್ಲೇ ಡಿಸೆಂಬರ್ 8 ರಹೊತ್ತಿಗೆ ಕಾನೂನು, ಕಾರ್ಮಿಕ, ವಿದೇಶಾಂಗ ಇಲಾಖೆ, ಭಾರಿ ಕೈಗಾರಿಕೆ, ಸಾರ್ವಜನಿಕ ಇಲಾಖೆ ಸೇರಿದಂತೆ 7 ಸಚಿವಾಲಯಗಳ ಸೈಬರ್ ಭದ್ರತೆ ಕುರಿತು ಪರಿಶೀಲನೆ ನಡೆಸುವಂತೆ ಪ್ರಧಾನಿ ಕಚೇರಿ ಸೂಚಿಸಿದೆ. ಅಂತೆಯೇ ಸೈಬರ್ ದಾಳಿ ನಿಗ್ರಹ ಸಂಬಂಧ ಈ ಎಲ್ಲ ಸಚಿವಾಲಯಗಳಿಗೂ ಉನ್ನತ ಮಟ್ಟದ ತರಬೇತಿ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದೆ ಎಂದು ಹೇಳಲಾಗಿದೆ.