ನವದೆಹಲಿ: ಭಾರತ, ಚೀನಾ ಎರಡೂ ರಾಷ್ಟ್ರಗಳಿಗೆ ಅತಿ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಒಂದು ಹಂತದಲ್ಲಿ ಎರಡೂ ರಾಷ್ಟ್ರಗಳು ಒಟ್ಟಿಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ಬೌದ್ಧ ಧರ್ಮ ಗುರು ದಲೈ ಲಾಮ ಹೇಳಿದ್ದಾರೆ.
ಭಾರತ ಹಾಗೂ ಚೀನಾ ಜೊತೆಗೂಡಿ ನಿರ್ದಿಷ್ಟ ಹಂತದಲ್ಲಿ ಕಾರ್ಯನಿರ್ವಹಿಸುತ್ತಿವೆ, ಎರಡು ಬಿಲಿಯನ್ ಜನರು ಒಗ್ಗಟ್ಟಿನಿಂದ ಕೆಲಸ ಮಾಡುವುದನ್ನೊಮ್ಮೆ ಊಹಿಸಿಕೊಳ್ಳಿ ಎಂದು ದಲೈ ಲಾಮ ಹೇಳಿದ್ದು ಮತ್ತೊಬ್ಬರ ಸಾಮರ್ಥ್ಯವನ್ನು ಹಾಳುಮಾಡುವುದಕ್ಕೆ ಎರಡೂ ರಾಷ್ಟ್ರಗಳಿಗೆ ಸಾಧ್ಯವಿಲ್ಲ ಎಂದಿದ್ದಾರೆ.
ನಿಮಗೆ ಇಷ್ಟವಿದೆಯೋ ಇಲ್ಲವೋ, ಇಬ್ಬರೂ ಪಕ್ಕ ಪಕ್ಕದಲ್ಲಿಯೇ ಜೀವಿಸಬೇಕು ಎಂದಿರುವ ದಲೈ ಲಾಮ, ಎರಡೂ ರಾಷ್ತ್ರಗಳ ನಡುವಿನ ಧಾರ್ಮಿಕ ಸಂಬಂಧದ ಬಗ್ಗೆಯೂ ಮಾತನಾಡಿದ್ದು ಚೀನಾದ ಹುನ್ ತ್ಸಾಂಗ್ ನಳಂದಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಸಂಸ್ಕೃತಿಯನ್ನು ಚೀನಾಗೆ ಪರಿಚಯಿಸಿದ್ದರು, ನಳಂದಾದ ಎಲ್ಲಾ ಚಿಂತಕರು ಭಾರತೀಯರೇ ಆಗಿದ್ದು ನಳಂದಾ ಸಂಸ್ಕೃತಿ ಭಾರತದ ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.
ಯುದ್ಧ ಕಲಿಗಳಾಗಿದ್ದ ಟಿಬೇಟಿಯನ್ನರನ್ನು ನಳಂದ ವಿಶ್ವವಿದ್ಯಾನಿಲಯ ಸಹಾನುಭೂತಿಯುಳ್ಳವರನ್ನಾಗಿ, ಅಹಿಂಸಾವಾದಿಗಳನ್ನಾಗಿಸಿದೆ. ಟಿಬೆಟ್ ಮಂಗೋಲೊಯನ್ನರ ರೀತಿಯಲ್ಲಿ ತನ್ನ ಹಿಂದಿನ ಯುದ್ಧ ಕಲಿಗಳ ಪ್ರವೃತ್ತಿಯನ್ನೇ ಉಳಿಸಿಕೊಂಡಿದ್ದರೆ ಚೀನಾದಿಂದ ಆಕ್ರಮಣಕ್ಕೊಳಗಾಗುತ್ತಿರಲಿಲ್ಲ ಎಂದು ನನ್ನ ಭಾರತದ ಸ್ನೇಹಿತರೊಂದಿಗೆ ಲಘು ಧಾಟಿಯಲ್ಲಿ ಹೇಳುತ್ತಿರುತ್ತೇನೆ ಎಂದು ದಲೈ ಲಾಮ ಹೇಳಿದ್ದಾರೆ.