ಬೆಂಗಳೂರು: ಸರಕು, ಸೇವಾ ತೆರಿಗೆ (ಜಿಎಸ್‌ಟಿ) ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದಿದ್ದರೆ ಉತ್ಪಾದಕರು ಹಾಗೂ ಡೀಲರ್ ಗಳ ವಿರುದ್ಧ ಕಠಿಣ ಕ್ರಮ ಖಚಿತ ಎಂದು ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಜಿಎಸ್‌ಟಿ ರಾಜ್ಯ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷ ಸುಶೀಲ್ ಕುಮಾರ್ ಮೋದಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಜಿಎಸ್ ಟಿ ಸಮಿತಿಯ 4ನೇ ಸಭೆಯಲ್ಲಿ ಪಾಲ್ಗೊಂಡು ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್ ಟಿ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿದ್ದಾರೆ. ಸಾರ್ವಜನಿಕರೂ ಸೇರಿದಂತೆ ವ್ಯಾಪಾರ-ವ್ಯವಹಾರ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ. ಜಿಎಸ್ ಟಿಯಡಿ ತೆರಿಗೆ ಪ್ರಮಾಣ ಇಳಿಕೆಯ ಲಾಭ ಗ್ರಾಹಕರಿಗೆ ಸಿಗಬೇಕು. ಉತ್ಪಾದಕರು ಹಾಗೂ ಡೀಲರ್ ಗಳು ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ವಂಚಿಸುವುದು ಕಂಡುಬಂದರೆ, ರಾಜ್ಯ ಜಿಎಸ್ ಟಿ ಪರಿಶೀಲನಾ ಸಮಿತಿಗೆ ದೂರು ನೀಡಬಹುದು. ಆ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಎಸ್ ಟಿ ಜಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಣ ಹಾದಿಯಲ್ಲಿ ಸಾಗುತ್ತಿದ್ದು, ಸೆಪ್ಟಂಬರ್ ಅಂತ್ಯಕ್ಕೆ ಜಿಎಸ್ ಟಿಯಿಂದ 93,141 ಕೋಟಿ ರೂ. ಹಾಗೂ ಅಕ್ಟೋಬರ್‌ನಲ್ಲಿ 95,133 ಕೋಟಿ ರೂ. ತೆರಿಗೆ ಆದಾಯ ಸಂಗ್ರಹವಾಗಿದೆ. ಜಿಎಸ್ ಟಿಯಡಿ ತೆರಿಗೆ ಪಾವತಿಸದವರ ಪ್ರಮಾಣ ಆಗಸ್ಟ್‌ನಲ್ಲಿ ಶೇ.28.4ರಷ್ಟಿದ್ದರೆ, ಅಕ್ಟೋಬರ್‌ನಲ್ಲಿ ಈ ಪ್ರಮಾಣ ಶೇ.17.6ಕ್ಕೆ ಇಳಿದಿದೆ. ರೂಪಾಯಿ ಲೆಕ್ಕಾಚಾರದಂತೆ ಕಳೆದ ಆಗಸ್ಟ್‌ನಿಂದ ಅಕ್ಟೋಬರ್ ವರೆಗೂ 12,208 ಕೋಟಿ ರೂ.ನಿಂದ 7,560 ಕೋಟಿ ರೂಪಾಯಿಗೆ ಇಳಿದಿದೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.
ಇದೇ ವೇಳೆ 17 ರಾಜ್ಯಗಳಲ್ಲಿ ಗರಿಷ್ಠ ತೆರಿಗೆ ಆದಾಯ ಕೊರತೆ ಹೆಚ್ಚಾಗಿದ್ದು, ಕರ್ನಾಟಕ ಸಹಿತ 9 ರಾಜ್ಯಗಳಲ್ಲಿ ತೆರಿಗೆ ಆದಾಯ ಕೊರತೆ ಕಡಿಮೆಯಾಗಿದೆ. ದೇಶದ ಎಲ್ಲ ರಾಜ್ಯಗಳ ಜಿಎಸ್ ಟಿ ಸರಾಸರಿ ತೆರಿಗೆ ಕೊರತೆ ಆದಾಯ ಇಳಿಕೆಯಾಗಿದೆ. 2016-17ನೇ ಸಾಲಿನಲ್ಲಿ ಕೇಂದ್ರ, ರಾಜ್ಯಗಳ ಎಲ್ಲ ತೆರಿಗೆಗಳಿಂದ ಒಟ್ಟು 8.8 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2017-18ನೇ ಸಾಲಿನಲ್ಲಿ ಜಿಎಸ್ ಟಿಯಿಂದ ಶೇ.14ರಷ್ಟು ಪ್ರಗತಿ ನಿರೀಕ್ಷಿಸಿದ್ದೇವೆ. 11.5 ಲಕ್ಷ ಕೋಟಿ ರೂಪಾಯಿ ತೆರಿಗೆ ಬರಬೇಕಿದ್ದು, ತಿಂಗಳಿಗೆ 96 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹಿಸಬೇಕಿದೆ. ಪ್ರಸ್ತುತ 92 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಸುಶೀಲ್ ಕುಮಾರ್ ಮೋದಿ ಮಾಹಿತಿ ನೀಡಿದರು.
ಅಂತೆಯೇ ಜಿಎಸ್‌ಟಿ ನೆಟ್‌ವರ್ಕ್ ಸುಧಾರಿಸುವ ನಿಟ್ಟಿನಲ್ಲಿ ನುರಿತ ಮತ್ತು ಅನುಭವಿ ಎಂಜಿನಿಯರ್ ಗಳನ್ನು ಒದಗಿಸುವಂತೆ ಇನ್ಫೋಸಿಸ್ ಗೆ ಮನವಿ ಮಾಡಿದ್ದೇವೆ. ನೆಟ್ ವರ್ಕ್ ಸುಧಾರಣೆಗೆ 100 ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. 30 ರಾಜ್ಯಗಳ ನುರಿತ ಅನುಭವಿ ಎಂಜಿನಿಯರ್ ಗಳು ಒಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಲಾಭ ನಿಯಂತ್ರಣ ಪ್ರಾಧಿಕಾರಕ್ಕೇ ಅಧಿಕಾರ
ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ ಸುಮಾರು 200ಕ್ಕೂ ಅಧಿಕ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿತ್ತು. ಇದಾದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆ ಲಾಭ ನಿಯಂತ್ರಣ ಪ್ರಾಧಿಕಾರ ರಚನೆಗೆ ಅಸ್ತು ನೀಡಿದೆ. ವಸ್ತುವಿನ ತೆರಿಗೆ ಇಳಿಕೆ ಮಾಡಿದ್ದರೂ ಕಡಿಮೆಯಾದ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವು ದಾಗಿದೆ. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಭಾರೀ ಮೊತ್ತದ ದಂಡ, ಜಿಎಸ್‌ಟಿಯಡಿ ನೀಡಲಾದ ಅನುಮತಿಯನ್ನೇ ರದ್ದು ಮಾಡಬಹುದಾಗಿದೆ.
ವಾಣಿಜ್ಯ ತೆರಿಗೆ ಸಲ್ಲಿಕೆ ಜಿಎಸ್ ಟಿಯ ಆತ್ಮ ಇದ್ದಂತೆ. ಆದಾಯ ತೆರಿಗೆ ಸಲ್ಲಿಕೆಯ ಪ್ರಮಾಣದಲ್ಲೂ ಸುಧಾರಣೆಯಾಗುತ್ತಿದ್ದು, ಜಿಎಸ್‌ಟಿಯಲ್ಲಿ ಜಿಎಸ್ ಟಿ ನೆಟ್‌ವರ್ಕ್ ವ್ಯವಸ್ಥೆಯೇ ಬೆನ್ನೆಲುಬು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos