ಸೋಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದ ಸಿಬಿಐ ನ್ಯಾಯಾಧೀಶನ ಹತ್ಯೆ?: ಅಸಹಜ ಸಾವು ಎನ್ನುತಿದೆ ಕುಟುಂಬ
ಸೋಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ, 2015 ರಲ್ಲಿ ನಿಧನರಾದ ಸಿಬಿಐನ ನ್ಯಾಯಾಧೀಶರಾಗಿದ್ದ ಬ್ರಿಜ್ ಗೋಪಾಲ್ ಹರ್ಕಿಷನ್ ಲೋಯಾ ಕುಟುಂಬ ಸದಸ್ಯರು ನ್ಯಾಯಾಧೀಶರ ಸಾವಿನ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ನ್ಯಾಯಾಧೀಶರಾಗಿದ್ದ ಬ್ರಿಜ್ ಗೋಪಾಲ್ ಹರ್ಕಿಷನ್ ಅವರು ಏಕಾಏಕಿ ಸಾವನ್ನಪ್ಪಿದ ಪರಿಸ್ಥಿತಿ ಹಾಗೂ ಕುಟುಂಬ ಸದಸ್ಯರ ಅನುಮತಿ ಇಲ್ಲದೇ ಮರಣೋತ್ತರ ಪರೀಕ್ಷೆ ನಡೆಸಿರುವುದರ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಸಾವು ಅಸಹಜವಾಗಿದ್ದಿರಬಹುದು ಎಂದು ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಮಿತ್ ಷಾ ಗುಜರಾತ್ ನ ಗೃಹಮಂತ್ರಿಯಾಗಿದ್ದ ಸಂದರ್ಭದಲ್ಲಿ ಸೋಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್ ಬೀ ಎನ್ ಕೌಂಟರ್ ನಡೆದಿತ್ತು, ಈ ಎನ್ ಕೌಂಟರ್ ನಕಲಿ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಯುತ್ತಿತ್ತು. 2014 ರ ಡಿ.1 ರಂದು ನ್ಯಾ. ಹರ್ಕಿಷನ್ ಲೋಯಾ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದರು. ಇದಾದ 6 ತಿಂಗಳಲ್ಲಿ ಅವರು ನಿಧನರಾಗಿದ್ದರು. ನ್ಯಾಯಾಧೀಶರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಕುಟುಂಬ ಸದಸ್ಯರು ಸಾವು ಅಸಹಜವಾಗಿರುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.
ನ್ಯಾಯಾಧೀಶರ ಸಾವಿನ ವರ್ಷಗಳ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಟುಂಬ ಸದಸ್ಯರು, 2014 ರ ನ.30 ರಂದು ಬ್ರಿಜ್ ಗೋಪಾಲ್ ಹರ್ಕಿಷನ್ ಲೋಯಾ ತಮ್ಮ ಸಹೋದ್ಯೋಗಿಯ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ನಾಗ್ಪುರಕ್ಕೆ ತೆರಳಿದ್ದರು, ಅಲ್ಲಿ ವಿಐಪಿ ಗೆಸ್ಟ್ ಹೌಸ್ ಆಗಿರೌವ ರವಿ ಭವನ್ ನಲ್ಲಿ ತಂಗಿದ್ದರು. ಡಿ.1 ರಂದು ಬೆಳಿಗ್ಗೆ ಲೋಯಾ ಅವರ ತಂದೆಗೆ ತಮ್ಮ ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಲುಪಿತ್ತು. ಅಷ್ಟೇ ಅಲ್ಲದೇ ಆ ವೇಳೆಗೆ ಆಗಲೇ ಮರಣೋತ್ತರ ಪರೀಕ್ಷೆಯನ್ನೂ ಮುಕ್ತಾಯಗೊಳಿಸಿ ಮೃತ ದೇಹವನ್ನು ಲಾತೂರ್ ಜಿಲ್ಲೆಯಲ್ಲಿರುವ ನ್ಯಾಯಾಧೀಶರ ಪೂರ್ವಿಕರ ಮನೆಗೆ ಕಳಿಸಲಾಗಿದೆ ಎಂದು ಕರೆ ಮಾಡಿದ್ದ ಆರ್ ಎಸ್ ಎಸ್ ನ ಕಾರ್ಯಕರ್ತರೊಬ್ಬರು ತಿಳಿಸಿದ್ದರು.
ಆರ್ ಎಸ್ ಎಸ್ ನ ಕಾರ್ಯಕರ್ತರಾಗಿದ್ದ ಈಶ್ವರ್ ಬಾಹೆತಿ ಎಂಬುವವರು ನ್ಯಾಯಾಧೀಶರ ತಂದೆಗೆ ಸಾವಿನ ಬಗ್ಗೆ ಮಾಹಿತಿ ನೀಡಿ, ಪಾರ್ಥಿವ ಶರೀರವನ್ನು ಲಾತೂರ್ ನಿಂದ 30 ಕಿಮೀ ದೂರ ಇರುವ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು. ನ್ಯಾಯಾಧೀಶರ ಸಾವಿನ ಬಗ್ಗೆ ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರಿಗೆ ಹೇಗೆ ಮಾಹಿತಿ ಸಿಕ್ಕಿತು? ಅವರು ಹೇಗೆ ನಮ್ಮ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಯಿತು ಎಂದು ನ್ಯಾಯಾಧೀಶರ ಕುಟುಂಬ ಸದಸ್ಯರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೇ ಮೃತ ದೇಹದ ಕತ್ತಿನ ಭಾಗದಲ್ಲಿ ಶರ್ಟಿನ ಹಿಂಭಾಗದಲ್ಲಿ ರಕ್ತದ ಕಲೆಗಳಿದ್ದವು, ಆಟೋದಲ್ಲಿ ಕರೆದುಕೊಂಡು ಹೋಗಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದ, ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ವಾಹನ ಸೌಕರ್ಯಗಳು ಇರಲಿಲ್ಲವೇ ಎಂದು ಪ್ರಶ್ನಿಸಿರುವ ನ್ಯಾಯಾಧೀಶರ ಕುಟುಂಬ ಸದಸ್ಯರು ನ್ಯಾಯಾಧೀಶರ ಸಾವು ಅಸಹಜವಾಗಿದ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics