ಚೆನ್ನೈ: ಬೈಕ್ ಕಳ್ಳತನ ಆರೋಪ ಸಂಬಂಧ 15 ವರ್ಷದ ಅಪ್ರಾಪ್ತ ಬಾಲಕನಿಗೆ ವಿಚಾರಣೆ ನೆಪದಲ್ಲಿ ಪೊಲೀಸರು ಚಿತ್ರಹಿಂಸೆ ನೀಡಿದ ಪರಿಣಾಮ ನೊಂದ ಬಾಲಕ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಿರುವೇರ್ಕಾಡು ಠಾಣಾ ಪೊಲೀಸರು ಬೈಕ್ ಕಳ್ಳತನ ಸಂಬಂಧ ಬಾಲಕ ಸಿ ಡೇವಿಡ್ ಎಂಬಾತನನ್ನು ಠಾಣೆಗೆ ಕರೆತಂದು ಆರೋಪ ಒಪ್ಪಿಕೊಳ್ಳುವಂತೆ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಇದರಿಂದ ಬೇಸರಗೊಂಡ ಬಾಲಕ ಸಾವಿಗೆ ಶರಣಾಗಿದ್ದಾನೆ.
ಈ ಸಂಬಂಧ ಪೊಲೀಸರು ಮೃತ ಬಾಲಕ ಪೋಷಕರು ತಮಗೆ ಕೆಟ್ಟ ಹೆಸರು ತಂದಿಟ್ಟೆ ಎಂದು ಬೈದಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳುತ್ತಿದ್ದಾರೆ.
ಡೇವಿಡ್ ಮೂಲತಃ ಆಂಧ್ರಪ್ರದೇಶದವನಾಗಿದ್ದು ಮಧ್ಯದಲ್ಲೇ ಶಾಲೆಯನ್ನು ಬಿಟ್ಟಿದ್ದ. ಆತನ ತಂದೆ ತಾಯಿಗಳು ಅಯಕ್ಕಮ್ ಪಂಚಾಯತ್ ನಲ್ಲಿ ಕೆಲಸ ಮಾಡುತ್ತಿದ್ದು ಭಾನುವಾರ ಪೊಲೀಸರು ಡೇವಿಡ್ ನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ಸೋಮವಾರ ಸಂಜೆ ಆತನನ್ನು ಹೋಗಲು ಸೂಚಿಸಿದ್ದರು. ಮಂಗಳವಾರ ಬೆಳಗ್ಗೆ ಪೋಷಕರು ಪೊಲೀಸ್ ಠಾಣೆಗೆ ತೆರಳಿದಾಗ ಆತನನ್ನು ನಿನ್ನೆ ಸಂಜೆ ಮನೆಗೆ ಕಳುಹಿಸಿರುವುದಾಗಿ ಹೇಳಿದ್ದಾರೆ.
ಠಾಣೆಯಿಂದ ಹೊರಬಂದ ಡೇವಿಡ್ ಸಂಬಂಧಿಕರ ಮನೆಗೆ ತೆರಳಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನು ಕಂಡ ಆತನ ಪೋಷಕರು ಠಾಣೆಯಲ್ಲಿ ಪೊಲೀಸರು ನೀಡಿದ ಚಿತ್ರಹಿಂಸೆಯನ್ನು ತಾಳಲಾರದೆ ಮಗ ಆತ್ಮಹತ್ಯೆಗೆ ಶರಣಾಗಿರುವುದಾಗಿ ಆರೋಪಿಸಿದ್ದಾರೆ.