ಮುಂಬೈ: ಮಹಾರಾಷ್ಟ್ರದ ಮಹಿಳಾ ಪೊಲೀಸ್ ಪೇದೆಯೊಬ್ಬರು ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವ ಸಲುವಾಗಿ ರಜೆ ಕೇಳಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಸಾಮಾನ್ಯವಾಗಿ ಮದುವೆಗೋ, ಸಂಬಂಧಿಕರ ಸಾವಿಗೋ, ಅಥವಾ ಆನಾರೋಗ್ಯದ ಕಾರಣಕ್ಕಾಗಿಯೋ ಬೇಡ.. ಪ್ರವಾಸಕ್ಕಾಗಿಯೋ ರಜೆಗೆ ಅರ್ಜಿ ಹಾಕುವುದನ್ನು ಕೇಳಿದ್ದೇವೆ. ಆದರೆ ಲಿಂಗ ಪರಿವರ್ತನೆಗೆ ರಜೆ ನೀಡಿ ಎಂದು ಮಹಿಳಾ ಪೊಲೀಸ್ ಪೇದೆಯೊಬ್ಬರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೌದು..ಮಹಾರಾಷ್ಟ್ರದ ಬೀಡ್ ಜಿಲ್ಲೆಯ 28 ವರ್ಷದ ಮಹಿಳಾ ಪೊಲೀಸ್ ಪೇದೆ ಲಲಿತಾ ಸಾಳ್ವೆ, ತಮ್ಮ ಲಿಂಗವನ್ನು ಪುರುಷಲಿಂಗವಾಗಿ ಪರಿವರ್ತನೆ ಮಾಡಿಕೊಳ್ಳಲು ಒಂದು ತಿಂಗಳ ರಜೆ ಬೇಕು ಎಂದು ಮಹಾರಾಷ್ಟ್ರ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಪೊಲೀಸ್ ಮಹಾ ನಿರ್ದೇಶಕರಿಗೆ ತಾವು ಅರ್ಜಿ ಸಲ್ಲಿಸಿದ್ದೆ. ಆದರೆ ರಜೆ ನೀಡಲು ನಿರಾಕರಿಸಿದ್ದರು. ಹೀಗಾಗಿ ಹೈಕೋರ್ಟ್ ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ಲಲಿತಾ ಹೇಳಿಕೊಂಡಿದ್ದಾರೆ.
ಅಲ್ಲದೆ ಲಿಂಗ ಪರಿವರ್ತನೆ ಬಳಿಕ ತಮ್ಮ ಹೆಸರನ್ನು ಲಲಿತಾ ಬದಲಿಗೆ ಲಲಿತ್ ಎಂದು ಬದಲಾಯಿಸುವಂತೆಯೂ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಲಲಿತಾ ಸಾಳ್ವೆ ಪರ ಎಜಾಜ್ ನಖ್ವಿ ಎಂಬುವವರು ಅರ್ಜಿ ಸಲ್ಲಿಕೆ ಮಾಡಿದ್ದು, ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಮಂಜುಳಾ ಚೆಳ್ಳೂರು ಅವರು ಅರ್ಜಿ ಸ್ವೀಕರಿಸಿ ಅರ್ಜಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲ.. ಸೂಕ್ತವಾದ ಪೀಠಕ್ಕೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಸಾಳ್ವೆ ಪರ ವಕೀಲರಾದ ಎಜಾಜ್ ನಖ್ವಿ ನಾಳೆ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಎಂ ಖೇಮ್ಕರ್ ನೇತೃತ್ವದ ವಿಭಾಗೀಯ ಪೀಠಕ್ಕೆ ಸಲ್ಲಿಕೆ ಮಾಡುವುದಾಗಿ ತಿಳಿಸಿದ್ದಾರೆ.
ಅರ್ಜಿಯಲ್ಲಿರುವಂತೆ ಜೂನ್ 1988ರಲ್ಲಿ ಜನಿಸಿದ ಲಲಿತಾ ಸಾಳ್ವೆ, ಹೆಣ್ಣಾಗಿ ಜನಿಸಿದ್ದರೂ ಕಳೆದ ಮೂರು ವರ್ಷಗಳಿಂದ ಆಕೆಯ ದೇಹದಲ್ಲಿ ಸಾಕಷ್ಚು ಬದಲಾವಣೆಗಳಾಗಿವೆ. ಈ ಬಗ್ಗೆ ವೈದ್ಯರನ್ನು ಸಂಪರ್ಕಸಿದಾಗ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ದೇಹದಲ್ಲಿ ವೈ ಕ್ರೋಮೋಸೋಮ್ ಗಳು ಹೆಚ್ಚಾಗಿರುವುದನ್ನು ಪತ್ತೆ ಮಾಡಿದ್ದಾರೆ. ಇದೇ ಕಾರಣಕ್ಕೆ ಜೆಜೆ ಆಸ್ಪತ್ರೆ ವೈದ್ಯರಿಂದ ಸಲಹೆ ಪಡೆದ ಲಲಿತಾ ಸಾಳ್ವೆ, ತಮ್ಮ ಲಿಂಗ ಪರಿವರ್ತನೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದ ಸಾಳ್ವೆಗೆ ಅಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ರಜೆ ಸಂಬಂಧ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಿರುವುದಾಗಿ ವಕೀಲ ಎಜಾಜ್ ನಖ್ವಿ ಹೇಳಿದ್ದಾರೆ.