ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರು
ಭಿಲ್ವಾರ/ಗುರುಗ್ರಾಮ: ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಪದ್ಮಾವತಿ' ಬಿಡುಗಡೆ ವಿರೋಧಿಸಿ ರಾಜಸ್ಥಾನ ಮತ್ತು ಹರಿಯಾಣದಲ್ಲಿ ರಜಪುತ್ ಕರ್ಣಿ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ನಡೆದಿದೆ.
ಚಿತ್ರದ ಬಿಡುಗಡೆ ವಿರೋಧಿಸಿ ಹರಿಯಾಣದ ಗುರುಗ್ರಾಮದ ಉಪ ಆಯುಕ್ತರ ಕಚೇರಿ ಎದುರಿ ಕರ್ಣಿ ಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ಣಿ ಸೇನಾ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನ ಅವರು, ಹರಿಯಾಣದಲ್ಲಿ ಪದ್ಮಾವತಿ ಚಿತ್ರವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಇನ್ನು ರಾಜಸ್ಥಾನದ ಭಿಲ್ವಾರದಲ್ಲಿ ಇಂದು ಬಂದ್ ಕರೆ ನೀಡಿದ್ದ ಕರ್ಣಿ ಸೇನಾ ಕಾರ್ಯಕರ್ತರು ಭಿಲ್ವಾರ ಚಿತ್ರಮಂದಿರದ ಎದುರು ಧರಣಿ ನಡಸಿದರು. ಈ ವೇಳೆ ಚಿದ್ರಮಂದಿರದ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದು ಗದ್ದಲ ಸೃಷ್ಟಿಸಿದ್ದರಿಂದ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು.