ಸೂರತ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು, ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕಿರುವ ಘನತೆಯನ್ನು ಗೌರವಿಸಲಿ ಎಂದು ಭಾನುವಾರ ಹೇಳಿದ್ದಾರೆ.
ಮನ್ ಕಿ ಬಾತ್: ಛಾಯ್ ಕೆ ಸಾಥ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಸೂರತ್'ಗೆ ಭೇಟಿ ನೀಡಿರುವ ಜೇಟ್ಲಿಯವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ರಾಜ್ಯ ಅಭಿವೃದ್ಧಿಯ ವಿರುದ್ಧ ಕಾಂಗ್ರೆಸ್ ಪ್ರಚಾರ ಕಾರ್ಯ ನಡೆಸುತ್ತಿದೆ. ಒಬ್ಬ ವ್ಯಕ್ತಿಗೆ ಉನ್ನತ ಸ್ಥಾನವನ್ನು ನೀಡಿದ್ದಾಗ ಅವರು ಅವರ ಸ್ಥಾನಕ್ಕಿರುವ ಗೌರವವನ್ನು ಕಾಪಾಡಬೇಕು. ಆದರೆ, ಕೆಲವರು ಅದನ್ನು ಕಲಿತೇ ಇಲ್ಲ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಹಾಗೂ ಗುಜರಾತ್ ರಾಜ್ಯದಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ತನ್ನ ಪ್ರಚಾರದಿಂದ ಜನರಿಗೆ ತಪ್ಪು ಮಾಹಿತಿ ನೀಡಿದಾಕ್ಷಣ ಸತ್ಯ ಬದಲಾಗುವುದಿಲ್ಲ ಎಂದಿದ್ದಾರೆ.
22 ವರ್ಷಗಳಿಂದಲೂ ಗುಜರಾತ್ ರಾಜ್ಯ ಬಿಜೆಪಿಗೆ ಅತ್ಯಂತ ಪ್ರಮುಖ ರಾಜ್ಯವಾಗಿದೆ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಸಾಮಾನ್ಯವಾಗಿಯೇ ನಾವು ಗೆಲವು ಸಾಧಿಸಲು ಶ್ರಮ ಪಡುತ್ತೇವೆ. ಈ ಬಾರಿಯ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿಯ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.