ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನವದೆಹಲಿ: ವೀಸಾ ಕುರಿತಂತೆ ಭಾರತದ ವಿರುದ್ಧ ಪಾಕಿಸ್ತಾನ ಆರೋಪಗಳನ್ನು ಮಾಡುತ್ತಿದ್ದರೂ ಸಂಕಷ್ಟದಲ್ಲಿ ನೆರವು ಕೇಳಿಕೊಂಡು ಬಂದಿರುವ ನಾಲ್ವರು ಪಾಕಿಸ್ತಾನದ ಪ್ರಜೆಗಳಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೆರವಿನ ಹಸ್ತವನ್ನು ಚಾಚಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ಪಾಕಿಸ್ತಾಜನ ಪ್ರಜೆ ಶಹಝೈಬ್ ಇಕ್ಬಾಲ್ ಎಂಬುವವರು, ಲಾಹೋರ್ ನಲ್ಲಿ ಇಕ್ಬಾಲ್ ಎಂಬ ಸಂಬಂಧಿಯೊಬ್ಬರಿಗೆ ಯಕೃತ್ತು ಕಸಿ ಮಾಡಿಸುವ ಅಗತ್ಯವಿದ್ದು, ಭಾರತೀಯ ವೈದ್ಯಕೀಸ ವೀಸಾ ಅಗತ್ಯವಿಗೆ. ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಗಳಿಂದ ನಮಗೆ ವೈದ್ಯಕೀಯ ವೀಸಾ ಒದಗಿಸಿ. ಅಲ್ಲಾ ಬಿಟ್ಟರೆ ನಮಗೆ ನೀವೇ ಕೊನೆಯ ನಂಬಿಕೆಎಂದು ಹೇಳಿದ್ದರು.
ಈ ಮನವಿಗೆ ಕೂಡಲೇ ಸ್ಪಂದನೆ ನೀಡಿರುವ ಸುಷ್ಮಾ ಅವರು, ಭಾರತ ನಿಮ್ಮ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಕೂಡಲೇ ನಿಮಗೆ ವೀಸಾ ಮಂಜೂರು ಮಾಡಲಾಗುತ್ತದೆ ಎಂದು ರಿಟ್ವೀಟ್ ಮಾಡಿದ್ದಾರೆ.
ಈ ನಡುವೆ ಮತ್ತೆ ಮೂವರು ಪಾಕಿಸ್ತಾನ ಪ್ರಜೆಗಳು ಸಹ ಭಾರತೀಯ ವೈದ್ಯಕೀಯ ವೀಸಾಗಾಗಿ ಸುಷ್ಮಾ ಅವರಿಗೆ ಮನವಿ ಮಾಡಿರುವ ಹಿನ್ನಲೆಯಲ್ಲಿ ಅವರಿಗೂ ವೀಸಾ ಮಂಜೂರು ಮಾಡಲಾಗುತ್ತದೆ ಎಂದು ಸುಷ್ಮಾ ಅವರು ಭರವಸೆ ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ಪ್ರಜೆಗಳಿಗೆ ಭಾರತ ನೀಡುತ್ತಿರುವ ವೈದ್ಯಕೀಯ ವೀಸಾ ಕುರಿತಂತೆ ಪಾಕಿಸ್ತಾನ ಆರೋಪಗಳನ್ನು ಮಾಡಿತ್ತು. ಭಾರತವು ಮಾನವೀಯ ಸಮಸ್ಯೆಗಳನ್ನು ರಾಜಕೀಯಗೊಳಿಸುತ್ತಿದೆ. ಭಾರತದ ವೈದ್ಯಕೀಯ ವೀಸಾದೊಂದಿಗೆ ಅನೇಕರು ಹೆಚ್ಚಿನ ವೆಚ್ಚ ಮಾಡಿ ಸುದೀರ್ಘ ಕಾಲದಿಂದ ಭಾರತೀಯ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಇದು ಖಂಡನೀಯ. ಪಾಕಿಸ್ತಾನದ ಪ್ರಜೆಗಳಾರೂ ಭಾರತೀಯ ಗಿಮಿಕ್ ನಿಂದ ಮೂರ್ಖರಾಗುವುದಿಲ್ಲ. ಇದು ಸಹಾನುಭೂತಿಯ ಸಂಕೇತವಲ್ಲ, ಭಾರತದ ರಾಜಕೀಯ ಮೇಲುಗೈಗೆ ಆಯ್ದ ವ್ಯಕ್ತಿಗಳ ನೆರವಿನೊಡನೆ ನಡೆಸುತ್ತಿರುವ ನಾಟಕ ಎಂದು ಹೇಳಿತ್ತು.