ನವದೆಹಲಿ: ನ.26 ರಂದು ಮನ್ ಕಿ ಬಾತ್ ನ 38 ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, 26/11 ಉಗ್ರ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ನ.26 ದೇಶದ ಸಂವಿಧಾನ ಅಳವಡಿಸಿಕೊಂಡ ದಿನವಾಗಿದೆ. ನ.26 ರಂದು ಸಂವಿಧಾನವನ್ನು ಸ್ಮರಿಸಬೇಕು, ಆದರೆ 9 ವರ್ಷಗಳ ಹಿಂದೆ ಮುಂಬೈ ನಲ್ಲಿ ಭೀಕರ ಉಗ್ರ ದಾಳಿ ಸಂಭವಿಸಿತ್ತು, ಉಗ್ರದಾಳಿಯಲ್ಲಿ ಹೋರಾಡಿ ಹುತಾತ್ಮರಾದ ಯೋಧರ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದು, ಭಯೋತ್ಪಾದನೆಯನ್ನು ಹತ್ತಿಕ್ಕಲು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಸಂವಿಧಾನ ದಿನಾಚರಣೆಯ ಬಗ್ಗೆಯೂ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶದ ಸಂವಿಧಾನವನ್ನು ನಿರ್ಮಿಸಲು ಅತ್ಯಂತ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಹೃದಯಪೂರ್ವಕ ನಮನ ಸಲ್ಲಿಸುತ್ತೇವೆ ಎಂದಿದ್ದಾರೆ. ನಮ್ಮ ಸಂವಿಧಾನ ಸಮಾಜದ ಬಡಾ ಹಾಗೂ ದುರ್ಬಲ ವರ್ಗದವರನ್ನು ರಕ್ಷಿಸುತ್ತದೆ, ನಾವು ಹೆಮ್ಮೆಪಡುವ ಅಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಲು ಸಂವಿಧಾನ ರಚನೆಕಾರರು ಶ್ರಮಿಸಿದ್ದಾರೆ, ಇದೇ ಸಂವಿಧಾನದ ಮಾರ್ಗದರ್ಶನದಲ್ಲಿ ನವ ಭಾರತವನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಇನ್ನು ಡಿ.7 ರಂದು ಆಚರಿಸಲಾಗುವ ಸೇನಾ ಧ್ವಜ ದಿನಾಚರಣೆಯ ಬಗ್ಗೆಯೂ ಮೋದಿ ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದು ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧನ ತ್ಯಾಗ ಬಲಿದಾನಗಳಿಗೆ ನಮನ ಸಲ್ಲಿಸುತ್ತಾನೆ. ಚೋಳ, ಛತ್ರಪತಿ ಶಿವಾಜಿ ಸಾಮ್ರಾಜ್ಯದ ಕಾಲಮಾನದಿಂದಲೂ ನಮ್ಮ ದೇಶದ ನೌಕಾ ಪಡೆ ಶ್ರೇಷ್ಠತೆಯನ್ನು ಹೊಂದಿದೆ ಎಂದಿದ್ದಾರೆ.