ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಪೋಷಕರಿಂದ ಸ್ವತಂತ್ರವಾಗಿದ್ದು, ಶಿಕ್ಷಣ ಮುಗಿಸುವಂತೆ ಸೋಮವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಲವ್ ಜಿಹಾದ್ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಶಿಕ್ಷಣ ಮುಂದುವರೆಸಲು ಹಾದಿಯಾಳನ್ನು ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪಥಿ ಕಾಲೇಜ್ ಗೆ ಕರೆದುಕೊಂಡು ಹೋಗಲಿ. ಕಾಲೇಜ್ ಯುವತಿಗೆ ಹಾಸ್ಟೇಲ್ ಸೌಲಭ್ಯ ಒದಗಿಸಬೇಕು ಮತ್ತು ಕಾಲೇಜ್ ಡೀನ್ ಆಕೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಜನವರಿ ಮೂರನೇ ವಾರಕ್ಕೆ ಮುಂದೂಡಿದ್ದಾರೆ.
ವಿಚಾರಣೆ ವೇಳೆ 'ನಾನು ಅಕ್ರಮವಾಗಿ ಪೋಷಕರ ವಶದಲ್ಲಿದ್ದು, ನನಗೆ ಸ್ವಾತಂತ್ರ್ಯ ಬೇಕು' ಎಂದು ಹಾದಿಯಾ ಕೋರ್ಟ್ ಗೆ ಮನವಿ ಮಾಡಿದಳು. ಮನವಿ ಪುರಷ್ಕರಿಸಿದ ಕೋರ್ಟ್ ಹಾದಿಯಾಳನ್ನು ಪೋಷಕರಿಂದ ಸ್ವತಂತ್ರಗೊಳಿಸಿದೆ.
ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಕೋರ್ಟ್ 100 ಪುಟಗಳ ತನಿಖಾ ವರದಿ ಸಲ್ಲಿಸಿತು.
ನಾಲ್ಕು ತಿಂಗಳ ಹಿಂದೆ ಹಾದಿಯಾ, ಶಫಿನ್ ಜಾಹನ್ ಅವರೊಂದಿಗಿನ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್, ಹಾದಿಯಾಳನ್ನು ಅವರ ತಂದೆ ಕೆಎಂ ಅಶೋಕನ್ ಮತ್ತು ತಾಯಿ ಪೊನ್ನಮ್ಮ ಅವರೊಂದಿಗೆ ಕಳುಹಿಸಿತ್ತು. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ.