ನವದೆಹಲಿ: ದೇಶದಲ್ಲಿರುವ ಉನ್ನತ ನ್ಯಾಯಾಧೀಶರು ಎಂದೂ ಸರ್ಕಾರದ ಪರವಾಗಿರುವುದಿಲ್ಲ ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಕೆಲ ದಿನಗಳ ಹಿಂದಷ್ಟೇ ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (ಎಸ್'ಸಿಬಿಎ) ಮಾಜಿ ಅಧ್ಯಕ್ಷರೊಬ್ಬರು, ಉನ್ನತ ನ್ಯಾಯಾಲಯದ ಕೆಲ ನ್ಯಾಯಾಧೀಶರು ಸರ್ಕಾರದ ಪರವಾಗಿರುತ್ತಾರೆಂದು ಹೇಳಿದ್ದರು.
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (ಎಸ್'ಸಿಬಿಎ) ಮಾಜಿ ಅಧ್ಯಕ್ಷರ ಹೇಳಿಕೆ ಕುರಿತಂತೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಾಧೀಶ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠ ಪ್ರತಿಕ್ರಿಯೆ ನೀಡಿದ್ದು, ಉನ್ನತ ನ್ಯಾಯಾಲಯ ನ್ಯಾಯಾಧೀಶರು ಎಂದೂ ಸರ್ಕಾರದ ಪರವಾಗಿರುವುದಿಲ್ಲ. ನ್ಯಾಯಾಲಯ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಸರ್ಕಾರವನ್ನು ಯಾವ ರೀತಿಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತದೆ ಎಂಬುದನ್ನು ಕೆಲವರು ಬಂದು ನೋಡಬೇಕು ಎಂದು ಹೇಳಿದೆ.