ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್
ಬೆಂಗಳೂರು: ಪೆರೋಲ್ ಅವಧಿಯಲ್ಲಿ ತನ್ನನ್ನು ರಾಜಕೀಯ ಚಟುವಟಿಕೆಗಳಿಂದ ದೂರುವಿರಿಸುವಂತೆ ಎಐಎಡಿಎಂಕೆ ಉಚ್ಛಾಟಿತ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಸೂಚನೆ ನೀಡಿದ್ದಾರೆಂದು ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರು ಶನಿವಾರ ಹೇಳಿದ್ದಾರೆ.
ಅನಾರೋಗ್ಯಕ್ಕೀಡಾಗಿರುವ ಪತಿ ಭೇಟಿಗಾಗಿ ಶಶಿಕಲಾ 5 ದಿನಗಳ ಕಾಲ ಪೆರೋಲ್ ಮೇಲೆ ಹೊರ ಬಂದಿದ್ದಾರೆ, ಪರಪ್ಪನ ಅಗ್ರಹಾರದಿಂದ ದಿನಕರನ್ ಜೊತೆಗೆ ಶಶಿಕಲಾ ಅವರು ಚೆನ್ನೈಗೆ ತೆರಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದಿನಕರನ್ ಅವರು, ಶಶಿಕಲಾ ಅವರು ಪೆರೋಲ್ ಮೇಲೆ ಹೊರಬಂದಿದ್ದಾರೆ. ಬಹಳ ಸಂತೋಷವಾಗುತ್ತಿದೆ. ಜೈಲಿನಿಂದ ಹೊರಬಂದ ಶಶಿಕಲಾ ಅವರನ್ನು ಕಾರ್ಯಕರ್ತರು ಅತ್ಯುತ್ತಮವಾಗಿ ಸ್ವಾಗತಿಸಿದ್ದಾರೆ. ಶಶಿಕಲಾ ಅವರ ಮನವಿಗೆ ಕರ್ನಾಟಕ ಸರ್ಕಾರದ ಜೈಲು ಅಧಿಕಾರಿಗಳು ಸ್ಪಂಧಿಸಿದ್ದಾರೆ. ಕೆಲ ಪರಿಸ್ಥಿತಿಗಳಿಂದಾಗಿ ಶಶಿಕಲಾ ಅವರು ಪೆರೋಲ್ ಮೇಲೆ ಹೊರಬಂದಿರುವುದರಿಂದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಯಾವುದೇ ಸಭೆಯಾಗಲೀ ಅಥವಾ ಪತ್ರಿಕಾಗೋಷ್ಠಿಗಳನ್ನು ನಡೆಸುವುದಿಲ್ಲ. ಚೆನ್ನೈ ನಗರವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಶಶಿಕಲಾ ಅವರು ಚೆನ್ನೈಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ ಸಾಕಷ್ಟು ನಿಯಮಗಳನ್ನು ಶಶಿಕಲಾ ಹೇರಿದೆ. ಹೀಗಾಗಿಯೇ ಶಶಿಕಲಾ ಅವರ ಜಾಮೀನು ಕೂಡ ತಡವಾಗುತ್ತಿದೆ. ರಾಜ್ಯ ಪೊಲೀಸರ ಮೇಲೂ ಸರ್ಕಾರ ಒತ್ತಡವನ್ನು ಹಾಕುತ್ತಿದೆ. ಆದರೆ, ನಮ್ಮನ್ನೂ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos