ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ತಮ್ಮ ವಿರುದ್ಧ 100 ಕೋಟಿ ರುಪಾಯಿ ಮಾನನಷ್ಟ ಮೊಕದಮ್ಮೆ ದಾಖಲಿಸಲು ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ವರದಿಗಾರ್ತಿ ರೋಹಿಣಿ ಸಿಂಗ್ ಅವರು, ಸತ್ಯವನ್ನು ಮಾತನಾಡುವುದು ನನ್ನ ಮೊದಲ ಕೆಲಸ. ಈ ಮೂಲಕ ನಾನು ನಿತ್ಯ ಸರ್ಕಾರವನ್ನು ಪ್ರಶ್ನಿಸುತ್ತೇನೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ನಾನು ಬೇರೆ ಪತ್ರಕರ್ತರ ಬಗ್ಗೆ ಮಾತನಾಡುವುದಿಲ್ಲ. ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಅಧಿಕಾರದಲ್ಲಿರುವವರ ಸತ್ಯದ ಬಗ್ಗೆ ಮಾತನಾಡುವುದು ನನ್ನ ಮೊದಲ ಕರ್ತವ್ಯ. ನಾನು ಈ ಹಿಂದೆ 2011ರಲ್ಲೂ ರಾಬರ್ಟ್ ವಾದ್ರಾ ಅವರ ಡಿಎಲ್ಎಫ್ ಡೀಲ್ ಬಗ್ಗೆ ವರದಿ ಮಾಡಿದ್ದೆ. ಆದರೆ ಹಾಗ ಈ ಮಟ್ಟಿಗೆ ಪ್ರತಿರೋಧ ಬಂದಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
2011ರಲ್ಲಿ ರೋಹಿಣಿ ಸಿಂಗ್ ಎಕನಾಮಿಕ್ ಟೈಮ್ಸ್ ವರದಿಗಾರ್ತಿಯಾಗಿದ್ದಾಗ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಅವರ ಡಿಎಲ್'ಎಫ್ ಹಗರಣವನ್ನು ಬಯಲಿಗೆ ತಂದಿದ್ದರು.
ಸಾಮಾನ್ಯವಾಗಿ ಪ್ರಭಾವಿ ವ್ಯಕ್ತಿಗಳು ಬೆದರಿಕೆ ಮತ್ತು ಕಿರುಕುಳ ನೀಡುವ ಮೂಲಕ ಪತ್ರಕರ್ತರನ್ನು ತಮ್ಮ ದಾರಿಗೆ ಎಳೆಯಲು ಯತ್ನಿಸುತ್ತಾರೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ ಆದರೆ ನಾನು ಆ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಇನ್ನು ನಿಮ್ಮಲ್ಲಿ ಅನೇಕರು ನನ್ನ ಬಗ್ಗೆ ತುಂಬಾ ಕರುಣಾಮಯಿಯಾಗಿದ್ದು, ನನಗೆ ಬಹುಶಃ ಇಲ್ಲದಿರುವ ಗುಣಗಳೊಂದಿಗೆ ಹೊಲಿಕೆ ಮಾಡುತ್ತಿದ್ದಾರೆ. ನಾನು ದಿಟ್ಟೆ, ಧೈರ್ಯಶಾಲಿ ಎನ್ನುವುದಕ್ಕಿಂತ ನಾನು ಒಬ್ಬ ಪ್ರತಕರ್ತೆ ಅಷ್ಟೆ ಎಂದು ರೋಹಿಣಿ ಸಿಂಗ್ ಹೇಳಿಕೊಂಡಿದ್ದಾರೆ.
ಜಯ್ ಷಾ ಅವರ ಕಂಪೆನಿ ಅಕ್ರಮ ವಹಿವಾಟು ನಡೆಸಿದೆ ಎಂದು ರೋಹಿಣಿ ಸಿಂಗ್ ಬರೆದ ವರದಿಯನ್ನು ದಿ ವೈರ್ ಸುದ್ದಿ ಜಾಲತಾಣ ಪ್ರಕಟಿಸಿತ್ತು. ಈ ವರದಿಯನ್ನು ಅಲ್ಲಗೆಳೆದಿರುವ ಜಯ್ ಷಾ, ಸುದ್ದಿ ಜಾಲತಾಣದ ಸಿಬ್ಬಂದಿ ವಿರುದ್ಧ 100 ಕೋಟಿ ರುಪಾಯಿ ಮಾನನಷ್ಟ ಪರಿಹಾರ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.