ನವದೆಹಲಿ: ಜಿಎಸ್ ಟಿ ಮತ್ತು ಡೀಸೆಲ್ ದರ ನಿತ್ಯ ಪರಿಷ್ಕರಣೆ ಮಾಡುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಲಾರಿ ಮಾಲೀಕರು ಸೋಮವಾರದಿಂದ ಎರಡು ದಿನಗಳ ಮುಷ್ಕರ ಆರಂಭಿಸಿದ್ದು, ಸಾವಿರಾರು ಲಾರಿಗಳು ರಸ್ತೆಗಿಳಿಯದಿರುವುದರಿಂದ ನಿತ್ಯ ಬಳಕೆಯ ವಸ್ತುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ 8 ಗಂಟೆಯಿಂದ ಲಾರಿ ಮುಷ್ಕರ ಆರಂಭವಾಗಿದ್ದು, ಕೊನೆ ಗಳಿಯಲ್ಲಿ ಸರ್ಕಾರ ಮತ್ತು ಲಾರಿ ಮಾಲೀಕರ ನಡುವಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿರುವುದಾಗಿ ಅಖಿಲ ಭಾರತ ಮೊಟಾರ್ ಸಾರಿಗೆ ಕಾಂಗ್ರೆಸ್ ಹೆಚ್ಚುವರಿ ಉಪಾಧ್ಯಕ್ಷ ಹರೀಶ್ ಸಭರವಾಲ್ ಅವರು ಹೇಳಿದ್ದಾರೆ.
ನಾವು ಇಂದು ಮತ್ತು ನಾಳೆ ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದು, ಯಾವುದೇ ಲಾರಿಗಳು ರಸ್ತೆಗಳಿಯುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮುಷ್ಕರ ನಡೆಸುತ್ತಿದ್ದೇವೆ, ಈ ಮುಷ್ಕರದಿಂದ ಲಾರಿ ಮಾಲೀಕರಿಗೆ 2 ಸಾವಿರ ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮುಷ್ಕರ ನಿರತರ ಪ್ರಮುಖ ಬೇಡಿಕೆಗಳು
ಹೆಚ್ಚುವರಿ ತೆರಿಗೆ ಸಂಗ್ರಹ ನಿಲ್ಲಿಸಬೇಕು.
ದೇಶವ್ಯಾಪಿ ಏಕ ರೂಪದ ಡೀಸೆಲ್ ದರ ಜಾರಿಗೆ ಬರಬೇಕು.
347 ಹೆದ್ದಾರಿ ಟೋಲ್ ರದ್ದುಪಡಿಸಿ ವಾರ್ಷಿಕ ಒಂದು ಬಾರಿ ಟೋಲ್ ನಿಯಮ ಜಾರಿ ಮಾಡಬೇಕು.
ಹೆದ್ದಾರಿಗಳಲ್ಲಿ ಸಾರಿಗೆ ಅಧಿಕಾರಿಗಳು ನೀಡುವ ಕಿರುಕುಳ ನಿಲ್ಲಿಸಬೇಕು.