ತ್ರಿಪುರ ರಾಜ್ಯಪಾಲ ತಥಾಗತ್ ರಾಯ್
ನವದೆಹಲಿ: ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ ದೀಪಾವಳಿ ವೇಳೆ ಪಟಾಕಿ ನಿಷೇಧ ಮಾಡಿದ ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧ ಹೇಳಿಕೆಗಳು ಮಂಗಳವಾರ ಮುಂದುವರೆದಿವೆ.
ಸುಪ್ರೀಂಕೋರ್ಟ್ ಆದೇಶ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ತ್ರಿಪುರ ರಾಜ್ಯಪಾಲ ತಥಾಗತ್ ರಾಯ್ ಅವರು, ಮೊದಲು ದಹಿ ಹಂಡಿ ನಿಷೇಧಿಸಲಾಯಿತು. ಈಗ ಪಟಾಕಿ ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಾರ್ಡ್ ವಾಪ್ಸಿ ಬ್ರಿಗೇಡ್ ನವರು ಹಿಂದೂಗಳ ಶವ ಸುಡುವ ಪದ್ಧತಿ ನಿಷೇಧಿಸಬೇಕು. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಎಂಬ ಅರ್ಜಿ ಸಲ್ಲಿಸಿದರೂ ಅಚ್ಚರಿಯಿಲ್ಲ ಎಂದು ಟೀಕಿಸಿದ್ದಾರೆ.
ಹಬ್ಬಗಳ ಮೇಲೆ ನ್ಯಾಯಾಲಯ ಈ ರೀತಿಯ ನಿಷೇಧ ಹೇರುವುದರಿಂದ ಬಹಳಷ್ಟು ಹಿಂದುಗಳಿಗೆ ನೋವಾಗಿದೆ. ನಾನು ನನ್ನ ಸಂವಿಧಾನಾತ್ಮಕ ಮಿತಿ ದಾಟಿ ಮಾತನಾಡುತ್ತಿಲ್ಲ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ದೆಹಲಿ ವಾಯುಮಾಲಿನ್ಯದ ಬಗ್ಗೆ ನನಗೆ ಅರಿವಿದೆ ಎಂದು ಹೇಳಿಕೊಂಡಿದ್ದಾರೆ.