ದೇಶ

ಡಿ.31ರೊಳಗೆ ಆರ್ ಕೆ ನಗರ ಉಪ ಚುನಾವಣೆ: ಚುನಾವಣಾ ಆಯೋಗ

Lingaraj Badiger
ನವದೆಹಲಿ: ಇದೇ ಡಿಸೆಂಬರ್ 31ರೊಳೆಗೆ ಚೆನ್ನೈನ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ ಘೋಷಿಸಿದೆ.
ಆದಷ್ಟು ಬೇಗ, ಡಿಸೆಂಬರ್ 31ರೊಳಗೆ ಆರ್ ನಗರ ಉಪ ಚುನಾವಣೆ ನಡೆಸುವಂತೆ ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ.
ಜನಪ್ರತಿನಿಧಿ ಕಾಯ್ದೆ ಪ್ರಕಾರ ಯಾವುದೇ ಶಾಸಕ ಅಥವಾ ಶಾಸಕಿ ಮೃತಪಟ್ಟ ನಂತರ, ಅವರಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಆದರೆ ಒಂದು ವರ್ಷ ಕಳೆಯುತ್ತಿದ್ದರೂ ಇದುವರೆಗೂ ಆರ್ ಕೆ ನಗರಕ್ಕೆ ಚುನಾವಣೆ ದಿನಾಂಕ ಘೋಷಿಸದಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಆಯೋಗಕ್ಕೆ ಆದೇಶಿಸಿತ್ತು.
ಕಳೆದ ಏಪ್ರಿಲ್ 12ರಂದು ಆರ್ ಕೆ ನಗರ ಉಪ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಆದರೆ ಮತದಾರರಿಗೆ ಭಾರಿ ಪ್ರಮಾಣದಲ್ಲಿ ಹಣ ಹಂಚಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಉಪ ಚುನಾವಣೆಯನ್ನು ರದ್ದುಗೊಳಿಸಿತ್ತು.
SCROLL FOR NEXT