ಅಹ್ಮದಾಬಾದ್: ಭಾರತೀಯ ಜನತಾ ಪಾರ್ಟಿ ಮಹಿಳಾ ವಿರೋಧಿ ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಬಿಜೆಪಿ ದೇಶಕ್ಕೆ ನಾಲ್ವರು ಮಹಿಳಾ ಮುಖ್ಯಮಂತ್ರಿಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಅವರು ಇಂದು ಅಹ್ಮದಾಬಾದ್ ನಲ್ಲಿ ಒಂದು ಲಕ್ಷಕ್ಕೂ ಅಧಿಕ ಮಹಿಳೆಯರನ್ನುದ್ದೇಶಿಸಿ ರ್ಯಾಲಿಯಲ್ಲಿ ಮಾತನಾಡಿ, ಪ್ರತಿಪಕ್ಷದವರು ಬಿಜೆಪಿಯನ್ನು ಮಹಿಳಾ ವಿರೋಧಿ ಪಕ್ಷವೆಂದು ಕರೆಯುತ್ತಿದೆ. ಆದರೆ ಬಿಜೆಪಿ ದೇಶಕ್ಕೆ 4 ಮಹಿಳಾ ಮುಖ್ಯಮಂತ್ರಿಗಳನ್ನು ಮತ್ತು ನಾಲ್ವರು ಮಹಿಳಾ ರಾಜ್ಯಪಾಲರನ್ನು ನೀಡಿದೆ. ಬಿಜೆಪಿ ಸರ್ಕಾರದಲ್ಲಿ 6 ಕ್ಯಾಬಿನೆಟ್ ದರ್ಜೆಯ ಸಚಿವೆಯರಿದ್ದಾರೆ ಎಂದು ಹೇಳಿದರು.
ಮೇ 2014ರಲ್ಲಿ ನನ್ನನ್ನು ವಿದೇಶಾಂಗ ಸಚಿವೆಯನ್ನಾಗಿ ನೇಮಿಸಲಾಯಿತು. ಇಂದು ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆಯಾಗಿದ್ದಾರೆ. ಭದ್ರತೆಗೆ ಸಂಪುಟ ಸಮಿತಿಯ ನಾಲ್ವರು ಸದಸ್ಯರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ ಎಂದರು.
ಬಿಜೆಪಿ ಸರ್ಕಾರಕ್ಕಿಂತ ಮೊದಲು ಹಿಂದಿನ ಸರ್ಕಾರದಲ್ಲಿ ಮಹಿಳೆಯರು ಗೃಹ ಇಲಾಖೆ, ರಕ್ಷಣೆ, ಹಣಕಾಸು ಮತ್ತು ವಿದೇಶಾಂಗ ಸಚಿವರಾಗಿರಲಿಲ್ಲ. ಭದ್ರತೆಯ ಸಂಪುಟ ಸಮಿತಿಯ ಸದಸ್ಯರಾಗಲಿಲ್ಲ ಎಂದು ತಮ್ಮ ಪಕ್ಷವನ್ನು ಶ್ಲಾಘಿಸಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ನಲ್ಲಿ ರ್ಯಾಲಿಯಲ್ಲಿ ಬಿಜೆಪಿಯನ್ನು ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿಟ್ಟುಕೊಂಡು ಮಹಿಳೆಯರನ್ನು ಬಿಜೆಪಿ ನಿರ್ಲಕ್ಷಿಸುತ್ತಿದೆ ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆ ಬಗ್ಗೆ ಆಸಕ್ತಿಯಿಲ್ಲ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics