ಪಾಟ್ನಾ ವಿವಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್-ಪ್ರಧಾನಿ ಮೋದಿ
ಪಾಟ್ನಾ: ಬಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ನಿತೀಶ್ ಕುಮಾರ್ ಅವರ ಬದ್ಧತೆ ನಿಜಕ್ಕೂ ಶ್ಲಾಘನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಶನಿವಾರ ಪಾಟ್ನಾದಲ್ಲಿ ಆಯೋಜನೆಯಾಗಿರುವ ಪಾಟ್ನಾ ವಿಶ್ವವಿದ್ಯಾಲಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ, ಬಿಹಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ನಿತೀಶ್ ಕುಮಾರ್ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಬಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ನಿತೀಶ್ ಕುಮಾರ್ ಅವರ ಬದ್ಧತೆ ಶ್ಲಾಘನಾರ್ಹವಾದದ್ದು. ಕೇಂದ್ರಸರ್ಕಾರ ಬಿಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆದ್ಯತೆ ನೀಡುತ್ತಿದೆ. ಬಿಹಾರ ಜ್ಞಾನ ಮತ್ತು ಗಂಗೆಯಿಂದ ಆಶೀರ್ವಾದಿಸಲ್ಪಟ್ಟಿದ್ದು, ಒಂದು ಕಾಲದಲ್ಲಿ ಹಾವಾಡಿಗರ ರಾಜ್ಯ ಎಂದು ಕರೆಸಿಕೊಳ್ಳುತ್ತಿದ್ದ ಪಾಟ್ನಾ ಇಂದು ಐಟಿ ರಾಜಧಾನಿಯಾಗಿ ಬೆಳೆದು ನಿಂತಿದೆ ಎಂದು ಮೋದಿ ಹೇಳಿದರು.
ಇದೇ ವೇಳೆ ಬಿಹಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಇಂದು 75ನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿದೆ. ಭಾರತದ ಶ್ರೀಮಂತ ರಾಜ್ಯಗಳಲ್ಲಿ ಬಿಹಾರ ಕೂಡ ಒಂದಾಗಿದ್ದು, ಬಿಹಾರ ಜ್ಞಾನ ಮತ್ತು ಗಂಗೆಯಿಂದ ಆಶೀರ್ವಾದಿಸಲ್ಪಟ್ಟಿದೆ. ಭಾರತದ ಪ್ರತೀಯೊಂದು ರಾಜ್ಯದಲ್ಲೂ ಇರುವ ಪ್ರಮುಖ ಐಎಎಸ್ ಅಧಿಕಾರಿಗಳ ಪೈಕಿ ಬಹುತೇಕರು ಬಿಹಾರ ಪಾಟ್ನಾ ವಿಶ್ವವಿದ್ಯಾಲಯದಲ್ಲಿ ಕಲಿತವರಾಗಿರುತ್ತಾರೆ. ಈ ಪೈಕಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಎಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಐಎಎಸ್ ಅಧಿಕಾರಿಗಳು ಬಿಹಾರದ ಮೂಲದವರಾಗಿದ್ದರು ಎಂದು ಮೋದಿ ಹೇಳಿದರು.
ಬಳಿಕ ಮಾತನಾಡಿದ ಸಿಎಂ ನಿತೀಶ್ ಕುಮಾರ್ ಅವರು, "ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿರುವುದು ರಾಜ್ಯಕ್ಕೆ ಅತ್ಯಂತ ಗೌರವ ಮತ್ತು ಘನತೆಯ ವಿಷಯವಾಗಿದೆ' ಎಂದು ಹೇಳಿದರು.
ಕಾಂಗ್ರೆಸ್ ಸಖ್ಯ ತೊರೆದ ನಿತೀಶ್ ಕುಮಾರ್ ಎನ್ ಡಿಎ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದಕ್ಕೆ ಮೊದಲು ಬಿಹಾರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇತರ ಪ್ರಮುಖರು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಲ್ಲಿಂದ ಪ್ರಧಾನಿ ಮೋದಿ ಅವರನ್ನು ನೇರವಾಗಿ ಪಾಟ್ನಾ ಸೈನ್ಸ್ ಕಾಲೇಜ್ ಕ್ಯಾಂಪಸ್ ಗೆ ಕರೆತರಲಾಯಿತು.