ದೇಶ

ಭಯೋತ್ಪಾದನೆಗೆ ಧರ್ಮವಿಲ್ಲ: ಟಿಬೆಟಿಯನ್ ಧರ್ಮಗುರು ದಲೈಲಾಮ

Srinivasamurthy VN
ಇಂಫಾಲ: ಮುಸ್ಲಿಂ ಭಯೋತ್ಪಾದಕ ಅಥವಾ ಕ್ರಿಶ್ಚಿಯನ್ ಭಯೋತ್ಪಾದಕ ಎಂಬುದಿಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ ದಲೈಲಾಮಾ ಅವರು, ಭಯೋತ್ಪಾದನೆಗೆ ಧರ್ಮವಿಲ್ಲ..ಮುಸ್ಲಿಂ ಭಯೋತ್ಪಾದಕ ಅಥವಾ ಕ್ರಿಶ್ಚಿಯನ್ ಭಯೋತ್ಪಾದಕ ಎಂಬುದಿಲ್ಲ..ಭಯೋತ್ಪಾದನೆಗೆ ಸೇರಿದ ದಿನವೇ ವ್ಯಕ್ತಿಯ  ಧರ್ಮ ಬದಲಾಗುತ್ತದೆ. ಭಯೋತ್ಪಾದನೆಯನ್ನು ಯಾವುದೋ ಒಂದು ಧರ್ಮಕ್ಕೆ ತಳಕು ಹಾಕುವುದು ಸರಿಯಲ್ಲ. ಯಾವ ಧರ್ಮವೂ ಹಿಂಸಾಚಾರವನ್ನು ಪ್ರೋತ್ಸಾಹಿಸುವುದಿಲ್ಲ. ಧರ್ಮವನ್ನು ಸಂರಕ್ಷಿಸುವ ಅಥವಾ ಅಭ್ಯಾಸ ಮಾಡುವ  ಮತ್ತು ಅದನ್ನು ಪ್ರಚಾರ ಮಾಡುವ ನೆಪದಲ್ಲಿ ಹಿಂಸಾಚಾರ ನಡೆಸುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಭಾರತ ಧಾರ್ಮಿಕ ವೈವಿದ್ಯಗಳ ನಾಡಾಗಿದ್ದು, ಇಲ್ಲಿ ವಿವಿಧ ಧರ್ಮಗಳ ಜನರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಇಂಕಹ ಪರಿಸ್ಥಿತಿಯಲ್ಲಿ ಧರ್ಮದ ಪ್ರಚಾರದ ನೆಪದಲ್ಲಿ ಮತಾಂತರ ಕೂಡ ಸರಿಯಲ್ಲ. ಮತಾಂತರವಾಗುವಂತೆ  ಒತ್ತಡ ಹೇರುವ ಹಕ್ಕು ಯಾವುದೇ ಸಂಘಟನೆಗಳಿಗೂ ಇಲ್ಲ ಎಂದು ದಲೈಲಾಮ ಹೇಳಿದ್ದಾರೆ.
ಚೀನಾ-ಭಾರತ ಯುದ್ಧ ಅಸಂಭವ
ಇದೇ ವೇಳೆ ಭಾರತ-ಚೀನಾ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದ ಸಂಬಂಧ ಮಾತನಾಡಿದ ದಲೈಲಾಮ ಅವರು, ಡೊಕ್ಲಾ ವಿವಾದ ಬೇಕಿರಲಿಲ್ಲ. ಆದರೆ ಭವಿಷ್ಯದಲ್ಲಿ ಇಂತಹ ವಿವಾದಗಳು ಪದೇ ಪದೇ  ಮರುಕಳಿಸುತ್ತಿರುತ್ತವೆ. ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಚೀನಾ ದೇಶಗಳು ಬಲಾಢ್ಯ ರಾಷ್ಟ್ರಗಳಾಗಿದ್ದು, ತಮ್ಮ ತಮ್ಮ ಗಡಿ ರಕ್ಷಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಎರಡೂ ರಾಷ್ಟ್ರಗಳು ನೆರೆ-ಹೊರೆ  ಜವಾಬ್ಜಾರಿಯನ್ನು ಅರಿತಿವೆ ಎಂದೆನಿಸುತ್ತದೆ. ಹೀಗಾಗಿ ನನ್ನ ಅಭಿಪ್ರಾಯದಂತೆ ಭಾರತ ಮತ್ತು ಚೀನಾ ನಡುವೆ ಮತ್ತೆ ಯುದ್ಧ ಸಂಭವಿಸುವುದ ಅಸಂಭವ ಎಂದೆನಿಸುತ್ತದೆ ಎಂದು ದಲೈಲಾಮ ಹೇಳಿದರು.
SCROLL FOR NEXT