ಚು.ಆಯೋಗದ ಲಂಚ ಪ್ರಕರಣದ ಆರೋಪಿಗೆ ತಿರುಗಾಡಲು ಮುಕ್ತ ಅವಕಾಶ: 7 ಪೊಲೀಸರು ಅಮಾನತು
ನವದೆಹಲಿ: ಚುನವಣಾ ಆಯೋಗದ ಲಂಚ ಪ್ರಕರಣದ ಆರೋಪಿಯಾಗಿರುವ ಬಂಧಿತ ಮಧ್ಯವರ್ತಿಯೊಬ್ಬನಿಗೆ ಹೊರಗೆ ತಿರುಗಾಡಲು ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ 7 ಪೊಲೀಸ್ ಸಿಬ್ಬಂದಿಗಳನ್ನು ಕೆಲಸದಿಂದ ವಜಾಮಾಡಲಾಗಿದೆ.
ಎಐಎಡಿಎಂಕೆ ಚಿಹ್ನೆಯ ವಿವಾದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಎಐಎಡಿಎಂಕೆ ಮುಖಂಡ ಟಿಟಿವಿ ದಿನಕರನ್ ನಿಂದ ಹಣ ಪಡೆದಿದ್ದ ಆರೋಪ ಎದುರಿಸುತ್ತಿದ್ದ ಸುಖೇಶ್ ಚಂದ್ರಶೇಖರ್ ನನ್ನು ಏಪ್ರಿಲ್ 16 ರಂದು ಪೊಲೀಸರು ಬಂಧಿಸಿದ್ದರು.
ಅ.9 ಹಾಗೂ 16 ರಂದು ವಿಚಾರಣೆಗಾಗಿ ಕೋರ್ಟ್ ಗೆ ಕರೆದೊಯ್ಯಲು ಚಂದ್ರಶೇಖರ್ ಗೆ ದೆಹಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ದೆಹಲಿ ಪೊಲೀಸ್ ಕಮಿಷನರ್ ಅಮೂಲ್ಯ ಪಟ್ನಾಯಕ್ ಗೆ ಸಲ್ಲಿಸಿದ್ದ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಚಂದ್ರಶೇಖರ್ ಗೆ ಹೊರಗೆ ಓಡಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಅಷ್ಟೇ ಅಲ್ಲದೇ ಬ್ಯುಸಿನೆಸ್ ಡೀಲ್ ಗಳನ್ನು ಕುದುರಿಸಲೂ ಸಹ ಅವಕಾಶ ಮಾಡಿಕೊಡಲಾಗಿತ್ತು. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, 7 ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಮುಖ್ಯ ವಕ್ತಾರ ಹಾಗೂ ವಿಶೇಷ ಆಯುಕ್ತ(ಟ್ರಾಫಿಕ್) ದೀಪೇಂದ್ರ ಪಾಠಕ್ ಮಾಹಿತಿ ನೀಡಿದ್ದಾರೆ.