ದೇಶ

ಗಿನ್ನೆಸ್ ದಾಖಲೆ ಕಡತಕ್ಕೆ ಅಯೋಧ್ಯೆ ದೀಪೋತ್ಸವ?

Srinivasamurthy VN
ಅಯೋಧ್ಯೆ: ಐತಿಹಾಸಿಕ ಸರಯೂ ನದಿ ದಂಡೆ ಮೇಲಿನ 'ರಾಮ್‌ ಕೀ ಪೈದಿ'ಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮ ಇದೀಗ ಗಿನ್ನೆಸ್ ದಾಖಲೆಯ ಹೊಸ್ತಿಲಲ್ಲಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಹೌದು..ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಪಾಲ್ಗೊಂಡಿದ್ದ ದೀಪೋತ್ಸವ ಕಾರ್ಯಕ್ರಮ ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾಗಿದ್ದು, ಸರಯೂ ನದಿ ದಂಡೆಯಲ್ಲಿ 1,87,213 ಮಣ್ಣಿನ  ಹಣತೆಗಳನ್ನು ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ನಿರ್ಮಿಸಲಾಗಿದೆ. ಈಗಾಗಲೇ ಗಿನ್ನೆಸ್‌ ಸಂಸ್ಥೆಯ ತಂಡ ದೀಪೋತ್ಸವ ಕಾರ್ಯಕ್ರಮವನ್ನು ಆಮೂಲಾಗ್ರ ಪರಿಶೀಲನೆ ನಡೆಸಿದ್ದು, ಇನ್ನೇನಿದ್ದರೂ ಪ್ರಮಾಣ ಪತ್ರ  ನೀಡಿಕೆಯೊಂದು ಬಾಕಿ ಉಳಿದಿದೆ ಎನ್ನಲಾಗಿದೆ. 
ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಈ ದೀಪೋತ್ಸವ ಕಾರ್ಯಕ್ರಮ ನಡೆದಿದ್ದು, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಫಯಾಸಾಬಾದ್‌ ನ ಡಾ.ರಾಮ್‌ ಮನೋಹರ್‌ ಲೋಹಿಯಾ ಅವಧ್‌ ವಿಶ್ವವಿದ್ಯಾಲಯದ  ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಗುಜರಾತ್‌ ಮೂಲದ 'ಇಮ್ಯಾಜಿನೇಷನ್‌' ಈವೆಂಟ್‌ ಮ್ಯಾನೇಜ್‌ ಮೆಂಟ್‌ ಕಂಪನಿ ಈ ಕಾರ್ಯಕ್ರಮ ಆಯೋಜಿಸಿತ್ತು.  ಇದರಲ್ಲಿ ವಿವಿಯ ಸಾವಿರಕ್ಕೂ ಹೆಚ್ಚು ಎನ್‌ಸಿಸಿ ಸ್ವಯಂ ಸೇವಕರು ಕೈಜೋಡಿಸಿದ್ದರು. ದಾಖಲೆಗಾಗಿ ಪ್ರವಾಸೋದ್ಯಮ ಇಲಾಖೆ 1,71,000 ಸಾವಿರ ಮಣ್ಣಿನ ಹಣತೆಗಳನ್ನು ಬೆಳಗಿಸಲು ತೀರ್ಮಾನಿಸಿತ್ತು. ಅದಕ್ಕಾಗಿ ರಾಮ್‌ ಕೀ  ಪೈದಿ ಮೆಟ್ಟಿಲುಗಳ ಮೇಲೆ 2 ಲಕ್ಷ ಹಣತೆಗಳನ್ನು ಸಾಲಾಗಿ ಜೋಡಿಸಿಡಲಾಗಿತ್ತು.
ಇದೇ ಕಾರಣಕ್ಕೆ ಈ ದೀಪೋತ್ಸವ ವಿಶ್ವದಾಖಲೆ ನಿರ್ಮಾಣಕ್ಕೆ ಸಜ್ಜಾಗಿದ್ದು, ಇದಕ್ಕೂ ಮೊದಲು ಹರಿಯಾಣ ರಾಜ್ಯದ ಪಂಚಕುಲದ ಡೇರಾ ಸಚ್ಚಾ ಸೌಧಾ ಸಂಸ್ಥೆ ಅತೀ ಹೆಚ್ಚು ಹಣತೆಗಳನ್ನು ಬೆಳಗಿಸಿದ ದಾಖಲೆ ಬರೆದಿತ್ತು. ಡೇರಾ  ಸಂಸ್ಥೆ ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ 1,50,009 ಹಣತೆ ಹಚ್ಚಿ ದಾಖಲೆಗೆ ಭಾಜನವಾಗಿತ್ತು. ಪ್ರಸ್ತುತ ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಂಸ್ಥೆಯ ಮುಖ್ಯಸ್ಥ ಬಾಬಾ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ಜೈಲು ಪಾಲಾಗಿದ್ದಾರೆ. 
SCROLL FOR NEXT