ರಾಜಕೋಟ್: ನೋಟ್ ನಿಷೇಧ ಹಾಗೂ ಜಿಎಸ್ ಟಿ ಜಾರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರು, ನೋಟ್ ನಿಷೇಧ ಜಾರಿಗೆ ಒತ್ತಡ ಹೇರಿದ್ದರೆ ನಾನು ರಾಜಿನಾಮೆ ನೀಡುತ್ತಿದ್ದೆ ಎಂದು ಶನಿವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಜಿಎಸ್ ಟಿ ಮತ್ತು ಬುಲೆಟ್ ರೈಲು ಯೋಜನೆಯನ್ನೂ ಆತುರದಿಂದ ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದ ಚಿದಂಬರಂ ಅವರು, ಒಂದು ವೇಳೆ ನನ್ನ ಪ್ರಧಾನಿ ನೋಟ್ ನಿಷೇಧದಂತಹ ಕಠಿಣ ಕ್ರಮವನ್ನು ಜಾರಿಗೊಳಿಸುವಂತೆ ನನಗೆ ಸೂಚಿಸಿದ್ದರೆ ನಾನು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಒಂದು ಜಾರಿಗೊಳಿಸಲೇಬೇಕು ಎಂದು ಒತ್ತಡ ಹೇರಿದ್ದರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ನೋಟ್ ನಿಷೇಧ ಮತ್ತು ಜಿಎಸ್ ಟಿ ಜಾರಿ ಮೋದಿ ಸರ್ಕಾರದ ಎರಡು ಬಹುದೊಡ್ಡ ತಪ್ಪುಗಳು. ನೋಟು ಅಪಮೌಲ್ಯೀಕರಣ ಒಂದು ಕೆಟ್ಟ ನಿರ್ಧಾರ. ಜಿಎಸ್ ಟಿ ಒಳ್ಳೆಯ ನಿರ್ಧಾರ ಆಧರೆ ಆತುರದಿಂದ ಜಾರಿಗೊಳಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಮೋದಿ ಸರ್ಕಾರ ದೇಶದ ಆರ್ಥಿಕತೆ ಭದ್ರವಾಗಿದೆ ಎಂದು ಹೇಳುತ್ತಿದೆ. ಆದರೆ ಭಾರತ್‌ಮಾಲಾ ಕಾರ್ಯಕ್ರಮದಲ್ಲಿ 6 ಲಕ್ಷ ಕೋಟಿ ರುಪಾಯಿಗಳನ್ನು ಬ್ಯಾಂಕ್‌ಗಳಿಗೆ ಮರುಬಂಡವಾಳವಾಗಿ ನೀಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ನೋಟು ನಿಷೇಧ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ದೇಶದ ಆರ್ಥಿಕತೆ ವಿನಾಶವಾಗಿ ಹೋಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ 2004 ಮತ್ತು 2009ರ ಅವಧಿಯಲ್ಲಿ ಆರ್ಥಿಕತೆ ಶೇ.8.5 ರಷ್ಟಿತ್ತು. ದೇಶದ ಇತಿಹಾಸದಲ್ಲಿಯೇ ಗರಿಷ್ಠ ಹಂತಕ್ಕೆ ತಲುಪಿತ್ತು. ಕಳೆದ 2014ರ ನಂತರ ಆರ್ಥಿಕತೆ ನಿಧಾನವಾಗಿ ಕುಸಿಯುತ್ತಾ ಬಂತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಸರಕಾರದ ನೋಟು ನಿಷೇಧ ತೀರ್ಮಾನದಿಂದ ದೇಶದ ಆರ್ಥಿಕತೆಗೆ ತೀವ್ರ ಧಕ್ಕೆಯಾಯಿತು. ನೋಟು ನಿಷೇಧದಿಂದ ಯಾವುದೇ ಕಪ್ಪು ಹಣ ಬಹಿರಂಗವಾಗಲಿಲ್ಲ. ನೋಟು ನಿಷೇಧದಿಂದ ಯಾವುದೇ ಲಾಭವಾಗಲಿಲ್ಲ. ಆದರೆ, ಆರ್ಥಿಕತೆ ಕುಸಿದು ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos