ನವದೆಹಲಿ: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಕೇರಳದ ಲವ್ ಜಿಹಾದ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಯುವತಿಯ ನಿರ್ಧಾರವೇ ಅಂತಿಮ ಎಂದು ಹೇಳಿದೆ.
ಪ್ರಕರಣ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯುವತಿ ತಂದೆಯ ಮನವಿಯನ್ನು ನಿರಾಕರಿಸಿತು, ಈ ವೇಳೆ ತನ್ನ ಜೀವನಕ್ಕೆ ಏನು ಬೇಕು ಎಂಬುದು ಯುವತಿಯೇ ನಿರ್ಧರಿಸಬೇಕು. ಆಕೆಯ ತೀರ್ಮಾನವೇ ಅಂತಿಮ ಎಂದು ಹೇಳಿದೆ. ಅಲ್ಲದೆ ಪ್ರಕರಣವನ್ನು ನವೆಂಬರ್ 27ಕ್ಕೆ ಮುಂದೂಡಿದ್ದು, ಮುಂದಿನ ವಿಚಾರಣೆಗೆ ಯುವತಿಯೇ ಖುದ್ಧ ಹಾಜರಾಗಬೇಕು ಎಂದು ಹೇಳಿದೆ. ಓಪನ್ ಕೋರ್ಟ್ ನಲ್ಲಿ ತಾವು ಯುವತಿಯ ವಿಚಾರಣೆ ನಡೆಸಲಿದ್ದು, ಆಕೆಯ ನಿರ್ಧಾರ ಕೇಳುತ್ತೇವೆ ಎಂದು ಹೇಳಿದೆ.
ಅಖಿಲ ಅಶೋಕನ್ ಎಂಬ 25 ವರ್ಷದ ಯುವತಿ ಈ ಹಿಂದೆ 27 ವರ್ಷದ ಶಫಿನ್ ಜಹಾನ್ ಎಂಬ ಯುವಕನನ್ನು ಪ್ರೀತಿಸಿ ಪೋಷಕರಿಗೆ ತಿಳಿಸದೇ ಮದುವೆಯಾಗಿದ್ದಳು, ಮದುವೆ ಬಳಿಕ ಆಕೆಯ ಹೆಸರನ್ನು ಹಾದಿಯಾ ಎಂದು ಬದಲಿಸಿಕೊಂಡಿದ್ದಳು. ಈ ಬಗ್ಗೆ ತಕರಾರು ತೆಗೆದಿದ್ದ ಪೋಷಕರು ಅಖಿಲಾ ಮದುವೆ ಕಾನೂನು ಬಾಹಿರ ಎಂದು ಹೇಳಿದ್ದರು. ಇಂತಹುದೇ ತೀರ್ಪನ್ನು ಕೇರಳ ಹೈಕೋರ್ಟ್ ನೀಡಿ ಅಖಿಲಾಳನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿತ್ತು. ಅಂತೆಯೇ ಪ್ರಕರಣ ಸಂಬಂಧ ಎನ್ ಐಎ ನೀಡಿದ್ದ ಪ್ರಕರಣದಲ್ಲಿ ಮುಸ್ಲಿಂ ಮಿಷನರಿ ಪಾತ್ರದ ಕುರಿತ ವರದಿ ಮೇರೆಗೆ ಅಖಿಲಾಳ ಮದುವೆಯನ್ನು ಅನೂರ್ಜಿತಗೊಳಿಸಿತ್ತು.
ಇದೀಗ ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಯುವತಿ ತೀರ್ಮಾನವೇ ಅಂತಿಮ ಎಂದು ಹೇಳಿದೆ.