ಮಧ್ಯಪ್ರದೇಶದ 90 ಲಕ್ಷ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ
ಮಧ್ಯಪ್ರದೇಶದ ಸುಮಾರು 90 ಲಕ್ಷ ಜಾನುವಾರುಗಳಿಗೆ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತಿದೆ.....
ಭೋಪಾಲ್: ಮಧ್ಯಪ್ರದೇಶದ ಸುಮಾರು 90 ಲಕ್ಷ ಜಾನುವಾರುಗಳಿಗೆ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ಈ ಮೂಲಕ ಕೇಂದ್ರದ ಪ್ರಾಯೋಜಕತ್ವದಲ್ಲಿ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುತ್ತಿರುವ ದೇಶದ ಮೊದಲ ರಾಜ್ಯ ಎಂಬ ಗೌರವಕ್ಕೆ ಪಾತ್ರವಾಗಲಿದೆ.
ಕೇಂದ್ರ ಸರ್ಕಾರದ ಗೋವು ಉತ್ಪನ್ನ ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಮಧ್ಯಪ್ರದೇಶದ ಸುಮಾರು 90 ಲಕ್ಷ ಡೈರಿ ಜಾನುವಾರುಗಳಿಗೆ 12 ಸಂಖ್ಯೆಯ ವಿಶಿಷ್ಟ ಗುರುತಿನ ಸಂಖ್ಯೆ(ಯುಐಡಿ)ಯನ್ನು ನೀಡಲಾಗುವುದು ಎಂದು ಮಧ್ಯಪ್ರದೇಶ ರಾಜ್ಯ ಜಾನುವಾರು ಮತ್ತು ಕೋಳಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್ ಬಿಎಸ್ ಭಡೋರಿಯಾ ಅವರು ಹೇಳಿದ್ದಾರೆ.
ಜಾನುವಾರುಗಳನ್ನು ಗುರುತಿಸಿ ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಕಾರ್ಯ ಈಗಾಗಲೇ ಆರಂಭಿಸಲಾಗಿದೆ. ಸಂಪೂರ್ಣ ಮಾಹಿತಿ ಸಂಗ್ರಹಿಸಿದ ನಂತರ ಅದನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರತಿ ತಿಂಗಳು ಕನಿಷ್ಠ 7.5ಲಕ್ಷ ಜಾನುವಾರುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಗುರಿ ಹೊಂದಲಾಗಿದೆ ಎಂದು ಭಡೋರಿಯಾ ಹೇಳಿದ್ದಾರೆ.
ಯುಐಡಿ ಸಂಖ್ಯೆ ಹೊಂದಿರುವ ಹಳದಿ ಬಣ್ಣದ ಟ್ಯಾಗ್ ಅನ್ನು ಜಾನುವಾರುಗಳ ಕಿವಿಯಲ್ಲಿ ಹಾಕಲಾಗುವುದು. ಪಶುಪಾಲನಾ ಇಲಾಖೆಯ ಸುಮಾರು 3,600 ಉದ್ಯೋಗಿಗಳು ಈ ಕೆಲಸ ಮಾಡಲಿದ್ದಾರೆ ಎಂದು ಭಡೋರಿಯಾ ತಿಳಿಸಿದ್ದಾರೆ.
ಈ ಹಿಂದೆ ಪ್ರಾಣಿಗಳ ಕಳ್ಳಸಾಗಣೆಯನ್ನು ತಪ್ಪಿಸುವುದಕ್ಕಾಗಿ ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರ ಕಳೆದ ಏಪ್ರಿಲ್ ನಲ್ಲಿ ಈ ಶಿಫಾರಸಿನ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು.