ನವದೆಹಲಿ: ಮಧ್ಯಪ್ರದೇಶದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ನ್ಯಾಯಾಲಯವು ಉದ್ಯಮಿ ನವೀನ್ ಜಿಂದಾಲ್ ಮತ್ತು ಇತರರಿಗೆ ಇಂದು ಜಾಮೀನು ನೀಡಿದೆ.
ವಿಶೇಷ ನ್ಯಾಯಾಧೀಶ ಭರತ್ ಪರಾಶರವರು ಜಿಂದಾಲ್ ಮತ್ತಿತರರಿಗೆ ಪ್ರತಿಯೊಬ್ಬರಿಗೂ ಒಂದು ಲಕ್ಷದ ವೈಯುಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ನೀಡುವ ಶರತ್ತಿನೊಡನೆ ಜಾಮೀನು ನೀಡಿದ್ದಾರೆ.
ನ್ಯಾಯಾಲಯ ಪ್ರಕರಣದ ಮುಂದಿನ ಸುತ್ತಿನ ವಿಚಾರಣೆಯನ್ನು ಅಕ್ಟೋಬರ್ 31 ರಂದು ನಡೆಸುವುದಾಗಿ ತಿಳಿಸಿತು.
ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಜೆಎಸ್ಪಿಎಲ್) ಮಾಜಿ ನಿರ್ದೇಶಕ ಸುಶೀಲ್ ಮಾರೂ, ಮಾಜಿ ಉಪಾಧ್ಯಕ್ಷ ಆನಂದ್ ಗೋಯಲ್ ಮತ್ತು ಸಿಇಒ ವಿಕ್ರಂ ಗುಜ್ರಾಲ್ ಅವರು ಜಿಂದಾಲ್ ಅವರ ಜತೆಗೆ ಜಾಮೀನು ಪಡೆದುಕೊಂಡಿದ್ದಾರೆ.
ಮಧ್ಯಪ್ರದೇಶದ ಉರ್ತಾನ್ ಉತ್ತರದ ಕಲ್ಲಿದ್ದಲು ಬ್ಲಾಕ್ ನ ಹಂಚಿಕೆಯಲ್ಲಿ ಮೋಸ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಹಿನ್ನೆಲೆಯಲ್ಲಿ ಜಿಂದಾಲ್ ಮತ್ತಿತರರನ್ನು ಬಂಧಿಸಲಾಗಿತ್ತು.
ಜೆಎಸ್ಪಿಎಲ್ ಸಲಕರಣೆ ಖರೀದಿ ಆದೇಶಗಳನ್ನು ತಪ್ಪಾಗಿ ಪ್ರಕಟಿಸಿದೆ ಜತೆಗೆ ಕಲ್ಲಿದ್ದಲು ಸಚಿವಾಲಯವನ್ನು ದಾರಿ ತಪ್ಪಿಸಲಾಗಿದೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಆರೋಪ ಮಾಡಿತ್ತು.
ಜಾರ್ಖಂಡ್ ನ ಅಮರಕಂಡ ಮರ್ಗಡಂಗಲ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಹ ಜಿಂಡಾಲ್ ವಿಚಾರಣೆ ಎದುರಿಸುತ್ತಿದ್ದಾರೆ.