ಪಾಟ್ನಾ(ಬಿಹಾರ): ಉತ್ತರಪ್ರದೇಶದಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸುತ್ತಿರುವ ಮಕ್ಕಳ ಸರಣಿ ಸಾವು ದುರಂತ ಸಂಬಂಧ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ರಾಷ್ಟ್ರೀಯ ಜನತಾದಳ(ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಆಗ್ರಹಿಸಿದ್ದಾರೆ.
ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಗಳಾದ ರಾಮ್ ಮನೋಹರ್ ಲೋಹಿಯಾ ಜಿಲ್ಲಾಸ್ಪತ್ರೆ ಮತ್ತು ಗೋರಕ್ ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದ ನೂರಾರು ಮಕ್ಕಳ ಸಾವನ್ನಪ್ಪಿದ್ದರು.
ದಿನ ಕಳೆದಂತೆ ಉತ್ತರಪ್ರದೇಶದಲ್ಲಿ ಪರಿಸ್ಥಿತಿ ದುಸ್ಥರವಾಗುತ್ತಿದೆ. ಇನ್ನು ಗೋರಕ್ ಪುರದ ಬಿಆರ್ಡಿ ಆಸ್ಪತ್ರೆಯಲ್ಲಿ ನಡೆದಿದ್ದ ದುರಂತವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕವರ್ ಮಾಡಿಕೊಂಡಿದ್ದರು. ಇದೀಗ ಫರೂಕಾಬಾದ್ ನಲ್ಲಿ ಇದೇ ರೀತಿಯ ದುರಂತ ಸಂಭವಿಸಿದ್ದು ಪರಿಸ್ಥಿತಿಯನ್ನು ಸುಧಾರಿಸಲು ಯೋಗಿ ಅವರ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದರು.
ಇನ್ನು ಭಾರತೀಯ ಜನತಾಪಕ್ಷ(ಬಿಜೆಪಿ) ಅಧಿಕಾರದಲ್ಲಿರುವ ಜಾರ್ಖಂಡ್ ನಲ್ಲೂ ಸಹ ಗೋರಕ್ ಪುರದ ದುರಂತದಂತೆ ಆರ್ಐಎಂಎಸ್ ಆಸ್ಪತ್ರೆಯಲ್ಲೂ ಈ ರೀತಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು ಉತ್ತರ ಪ್ರದೇಶದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಗೋರಕ್ ಪುರ ದುರಂತದಲ್ಲಿ 70ಕ್ಕೂ ಅಧಿಕ ಮಕ್ಕಳು ಮೃತಪಟ್ಟ ಘಟನೆ ನಂತರ ಇದೀಗ ಫರುಕಾಬಾದ್ ಜಿಲ್ಲೆಯ ರಾಮ್ ಮನೋಹರ್ ಲೋಹಿಯಾ ಜಿಲ್ಲಾಸ್ಪತ್ರೆಯಲ್ಲಿ ಕೂಡ ಅಂತಹದ್ದೇ ಘಟನೆ ನಡೆದಿದ್ದು 49 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.