ನವದೆಹಲಿ: ಬೆಂಗಳೂರಿನಲ್ಲಿ ಹತ್ಯೆಗೀಡಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಬುಧವಾರ ವರದಿ ಕೇಳಿದೆ ಎಂದು ತಿಳಿದುಬಂದಿದೆ.
ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಲ್ಲಿರುವ ತಮ್ಮ ನಿವಾಸದಲ್ಲೇ ಪತ್ರಕರ್ತೆ ಗೌರಿ ಲಂಕೇಳ್ ಅವರು ಹತ್ಯೆಗೀಡಾಗಿದ್ದು, ಈ ಸಂಬಂಧ ಕೇಂದ್ರ ಗೃಹ ಇಲಾಖೆ ರಾಜ್ಯ ಗೃಹ ಕಾರ್ಯದರ್ಶಿಗಳಿಂದ ಮಾಹಿತಿ ಕೇಳಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯ ಗೃಹ ಕಾರ್ಯದರ್ಶಿಗಳಿಗೆ ಪತ್ರಬರೆದಿದ್ದು, ಹತ್ಯೆ ಸಂಬಂಧ ವರದಿ ನೀಡುವಂತೆ ಕೇಳಿದ್ದಾರೆ.
ಇನ್ನು ಗೌರಿ ಲಂಕೇಶ್ ಹತ್ಯೆ ಸಂಬಂಧ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹತ್ಯೆ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಇಬ್ಬರು ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಮೇಲೆ ದಾಳಿ ಮಾಡಿದ್ದಾರೆ. ಈ ಪೈಕಿ ಓರ್ವ ದುಷ್ಕರ್ಮಿ ಗೌರಿ ಅವರ ಮೇಲೆ ಗುಂಡು ಹಾರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಮನೆಗೆ ಬಂದ ಗೌರಿ ಅವರು ತಮ್ಮ ಗೇಟ್ ಒಂದು ಭಾಗವನ್ನು ತೆರೆದಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಹೆಲ್ಮೆಟ್ ತೊಟ್ಟಿದ್ದ ದುಷ್ಕರ್ಮಿ ಗೌರಿ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡು ಬೀಳುತ್ತಿದ್ದಂತೆಯೇ ಗೌರಿ ಲಂಕೇಶ್ ಅವರು ಮನೆಯೊಳೆಗೆ ಓಡಲು ಯತ್ನಿಸಿದ್ದು, ಮನೆ ಬಾಗಿಲ ಬಳಿ ಬಿದಿದ್ದಾರೆ. ನೆಲಕ್ಕುರುಳಿದ ಗೌರಿ ಅವರ ಮೇಲೆ ಮತ್ತೆ ದುಷ್ಕರ್ಮಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಎದೆ ಭಾಗಕ್ಕೆ, ದೇಹದ ಸೊಂಟದ ಭಾಗಕ್ಕೆ ಗುಂಡುಗಳು ಹೊಕ್ಕಿವೆ. ಇವಿಷ್ಟೂ ದೃಶ್ಯಾವಳಿಗಳು ಮನೆಯಲ್ಲಿ ಅಳವಡಿಸಲಾಗಿದ್ದ 4 ಸಿಸಿಟಿವಿ ಕ್ಯಾಮೆರಾಗಳಿಂದ ಪತ್ತೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಅಂತೆಯೇ ಪ್ರಕರಣ ಸಂಬಂಧ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿರುವುದಾಗಿ ಸಿಎಂ ತಿಳಿಸಿದ್ದರು.