ಮುಂಬೈ: ಅತ್ಯಾಚಾರಕ್ಕೆ ಒಳಗಾಗಿದ್ದ 13 ವರ್ಷದ ಬಾಲಕಿ ಕಳೆದ ಎರಡು ದಿನಗಳ ಹಿಂದೆ ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆ ಮಗು 42 ಗಂಟೆಗಳ ಬಳಿಕ ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
32 ವಾರಗಳ ಭ್ರೂಣವನ್ನು ಗರ್ಭಪಾತದ ಮೂಲಕ ಹೊರತೆಗೆಯಲು ಸುಪ್ರೀಂ ಕೋರ್ಟ್ ಕಳೆದ ಅನುಮತಿ ನೀಡಿತ್ತು. ಬಳಿಕ ಮುಂಬೈನ ಬೈಕುಲ್ಲಾದ ಸರ್ ಜೆಜೆ ಆಸ್ಪತ್ರೆಯ ವೈದ್ಯರು ಆ ಮಗುವನ್ನು ಸಿಸೇರಿಯನ್ ಮೂಲಕ ಹೊರ ತೆಗೆದಿದ್ದರು. 1.8 ಕೆಜಿ ಇದ್ದ ಮಗುವನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗು ನಿನ್ನೆ ರಾತ್ರಿ ಮೃತಪಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮಗುವಿನ ಮರಣೋತ್ತರ ಪರೀಕ್ಷಾ ವರದಿ ಬರುವವರೆಗೆ ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಆಸ್ಪತ್ರೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
13 ವರ್ಷದ ಬಾಲಕಿ ಇನ್ನೂ ಆಸ್ಪತ್ರೆಯಲ್ಲೇ ಇದ್ದು, ಸ್ತ್ರೀರೋಗತಜ್ಞ ಅಶೋಕ್ ಆನಂದ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕಿ ಸಂಪೂರ್ಣ ಚೇತರಿಸಿಕೊಂಡ ನಂತರ ಡಿಸ್ಚಾರ್ಜ್ ಮಾಡುವುದಾಗಿ ಆನಂದ್ ಅವರು ಹೇಳಿದ್ದಾರೆ.
ಏಳು ತಿಂಗಳ ಹಿಂದೆ ಬಾಲಕಿ ಮೇಲೆ ಆಕೆಯ ತಂದೆಯ ಬ್ಯುಸಿನೆಸ್ ಪಾರ್ಟನರ್ ಅತ್ಯಾಚಾರ ಎಸಗಿದ್ದ. ಬಾಲಕಿ ತೂಕ ಹೆಚ್ಚಾಗಿದ್ದ ಕಾರಣ ತಂದೆತಾಯಿ ಆಗಸ್ಟ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ 27 ವಾರಗಳ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಬಳಿಕ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಸರ ಅತ್ಯಾಚಾರ ಎಸಗಿರುವುದನ್ನು ಬಾಯಿಬಿಟ್ಟಿದ್ದ.