ದೇಶ

ನೇಪಾಳದಲ್ಲಿ ಅಡಗಿ ಕುಳಿತಿರುವ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್: ಗಡಿಯಲ್ಲಿ ಹೈ ಅಲರ್ಟ್

Manjula VN
ನವದೆಹಲಿ: ಲುಕ್ ಓಟ್ ನೋಟಿಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗದೆ, ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ನೇಪಾಳದಲ್ಲಿ ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಗಡಿಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 
ಹನಿಪ್ರೀತ್ ಬಂಧನಕ್ಕೊಳಪಡಿಸಲು ಪೊಲೀಸರು ಬಲೆ ಬೀಸಿದ್ದು, ಆಕೆಯನ್ನು ಬಂಧನಕ್ಕೊಳಪಡಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪೊಲೀಸರ ಕಣ್ಣು ತಪ್ಪಿಸಿಕೊಂಡು ತಿರುಗುತ್ತಿರುವ ಹನಿಪ್ರೀತ್ ನೇಪಾಳ ಗಡಿ ದಾಟಲು ಯತ್ನ ನಡೆಸುತ್ತಿರುವ ಮಾಹಿತಿ ತಿಳಿದುಬಂದ ಹಿನ್ನಲೆಯಲ್ಲಿ ಈಗಾಗಲೇ ಭಾರತ ಹಾಗೂ ನೇಪಾಳ ಗಡಿಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. 
ನೇಪಾಳ ಗಡಿ ಪ್ರದೇಶ ಹಾಗೂ ಠಾಣೆಗಳ ಮೇಲೆ ಆಕೆಯ ಫೋಟೋ ಇರುವ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ನೇಪಾಳಕ್ಕೆ ಹನಿಪ್ರೀತ್ ಪರಾರಿಯಾಗವ ಸಂಭವವಿದೆ ಎಂಬ ಗುಪ್ತಚರ ಮಾಹಿತಿಗಳ ಮೇಲೆ ಪೊಲೀಸರು ಈ ಕ್ರಮವನ್ನು ಕೈಗೊಂಡಿದ್ದಾರೆ. 
ಪಂಜಾಬ್ ರಾಜ್ಯದ ನೊಂದಾವಣಿ ಹೊಂದಿರಹುವ ವಾಹನವೊಂದನ್ನು ಅಧಿಕಾರಿಗಳು ಗಡಿ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. 
ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ ರಾಮ್ ರಹೀಮ್ ಸಿಂಗ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಬಂಧನದ ವೇಳೆ ಆತನನ್ನು ಅಪಹರಣ ಮಾಡಲು ರೂಪಿಸಿದ್ದ ಯೋಜನೆಯಲ್ಲಿ ಹನಿಪ್ರೀತ್ ಕೈವಾಡ ಕೂಡ ಇತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಆಕೆಯ ಮೇಲೆ ಪ್ರಕರಣ ದಾಖಲಾಗಿತ್ತು. 
ಸೆ.1 ರಂದು ಹನಿಪ್ರೀತ್ ವಿರುದ್ಧ ಹರಿಯಾಣ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದಾದ ಬಳಿಕ ಹನಿಪ್ರೀತ್ ತಲೆಮರೆಸಿಕೊಂಡಿದ್ದು, ಇನ್ನೂ ಆಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ. 
SCROLL FOR NEXT