ಯುವತಿಯನ್ನು ಹಿಂಬಾಲಿಸಿದ ಪ್ರಕರಣ: ಹರ್ಯಾಣ ಬಿಜೆಪಿ ರಾಜ್ಯಾಧ್ಯಕ್ಷರ ಪುತ್ರನಿಗೆ ಜಾಮೀನು ನಿರಾಕರಣೆ
ಯುವತಿಯನ್ನು ಹಿಂಬಾಲಿಸಿದ ಆರೋಪವನ್ನು ಎದುರಿಸುತ್ತಿರುವ ಹರ್ಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲ ಪುತ್ರ ವಿಕಾಸ್ ಬರಾಲಗೆ ಜಾಮೀನು ನಿರಾಕರಿಸಲಾಗಿದೆ.
ಹರ್ಯಾಣದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ಕೋರ್ಟ್ ವಿಕಾಸ್ ಬರಾಲ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ವಿಕಾಸ್ ಬರಾಲ ಹಾಗೂ ಆತನ ಸ್ನೇಹಿತ ಆಶೀಶ್ ಕುಮಾರ್ ಹಿರಿಯ ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.
ಯುವತಿ ನೀಡಿದ ದೂರಿನ ಅನ್ವಯ ಆ.04 ಹಾಗೂ 05 ರಂದು ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಪ್ರಕರಣ ಜಾಮೀನು ನೀಡಬಹುದಾದ ಸೆಕ್ಷನ್ ಗಳಲ್ಲಿ ದಾಖಲಾಗಿದ್ದರಿಂದ ಜಾಮೀನು ಪಡೆದು ಬಂಧಿತರು ಹೊರಬಂದಿದ್ದರು. ಆ.09 ರಂದು ಪೊಲೀಸರು ಮತ್ತೆ ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 365 ಹಾಗೂ 511 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.