ದೇಶ

ಎನ್ಆರ್ ಐ ಮದುವೆಗೆ ಆಧಾರ್ ಕಡ್ಡಾಯ ಮಾಡಿ: ವಿದೇಶಾಂಗ ಸಚಿವಾಲಯಕ್ಕೆ ತಜ್ಞರ ಸಮಿತಿ

Lingaraj Badiger
ನವದೆಹಲಿ: ವಿಚ್ಛೇದನ ಮತ್ತು ವೈವಾಹಿಕ ವಿವಾದಗಳನ್ನು ತಡೆಯುವುದಕ್ಕಾಗಿ ಭಾರತದಲ್ಲಿ ಅನಿವಾಸಿ ಭಾರತೀಯರ(ಎನ್ಆರ್ಐ) ಮದುವೆ ನೋಂದಣಿಗೆ ಆಧಾರ್ ಕಡ್ಡಾಯಗೊಳಿಸಬೇಕು ಎಂದು ಅಂತರ ಸಚಿವಾಲಯ ಸಮಿತಿ ವಿದೇಶಾಂಗ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ವಿದೇಶಗಳಲ್ಲಿ ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಎನ್ಆರ್ಐ ಪತಿಗಳಿಂದ ಮಹಿಳೆಯರು ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುವುದು ತಡೆಯಲು ಹಾಗೂ ವಿಚ್ಚೇದನಕ್ಕೆ ಒಳಗಾಗುವ ಮಹಿಳೆಯ ಹಕ್ಕು ರಕ್ಷಿಸುವುದಕ್ಕಾಗಿ ಆಧಾರ್ ಕಡ್ಡಾಯಗೊಳಿಸಬೇಕು ಎಂದು ವಿಶೇಷ ಸಮಿತಿ ವರದಿ ನೀಡಿದೆ.
ಪತ್ನಿಗೆ ಹಿಂಸೆ ನೀಡುವ ಎನ್ಆರ್ಐ ಪತಿಯನ್ನು ವಶಕ್ಕೆ ಪಡೆಯುವುದಕ್ಕಾಗಿ ವಿವಿಧ ದೇಶಗಳೊಂದಿಗಿನ ಹಸ್ತಾಂತರ ಒಪ್ಪಂದಕ್ಕೆ ತಿದ್ದುಪಡಿ ತರಬೇಕು ಎಂದು ಸಹ ಸಮಿತಿ ಶಿಫಾರಸು ಮಾಡಿದೆ.
ಎನ್ ಆರ್ ಐಗಳು ಭಾರತದಲ್ಲಿರುವ ಯುವತಿಯರನ್ನು ಮದುವೆಯಾಗಿ ವಿದೇಶಕ್ಕೆ ಕರೆದೊಯ್ದ ಮೇಲೆ ಯುವತಿಯರ ಮೇಲೆ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣ ನಡೆದಿರುವ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಮಿತಿಯು ಇಲಾಖೆಗೆ ಈ ಶಿಫಾರಸು ಮಾಡಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಈಗಾಗಲೇ ಅನಿವಾಸಿ ಭಾರತೀಯರಿಗೆ, ಭಾರತ ಮೂಲದ ವಿದೇಶಿ ನಾಗರಿಕರಿಗೆ ಹಾಗೂ ವಿದೇಶಗಳಲ್ಲಿರುವ ಭಾರತೀಯ ಸಂಜಾತರಿಗೆ ಆಧಾರ್ ಕಾರ್ಡ್ ನೀಡುವ ಬಗ್ಗೆ ಹೊಸ ನಿಯಮಾವಳಿಗಳನ್ನು ರೂಪಿಸುತ್ತಿದೆ. ಇದರ ನಡುವೆಯೇ, ಈಗ ಅಂತರ ಸಚಿವಾಲಯದ ಸಮಿತಿಯ ಈ ಹೊಸ ಶಿಫಾರಸು ಮಾಡಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
SCROLL FOR NEXT