ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್
ಜಮ್ಮು: ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲವನ್ನು ನೀಡಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ನಾಲ್ಕು ದಿನಗಳ ಕಾಲ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಅವರು, ಅವರು, ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ. ಕಾಶ್ಮೀರಿಗರ ನಂಬಿಕೆಗಳನ್ನು ಮರು ಪಡೆಯಲು ಸರ್ಕಾರ ಯತ್ನ ನಡೆಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿನ ಜನರ ನಂಬಿಕೆಯನ್ನು ಮರು ಪಡೆಯಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಸಮಸ್ಯೆ ಬಗೆಹರಿಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಹಾಗೂ ಬೆಂಬಲಗಳು ಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಶ್ಮೀರದಲ್ಲಿ ಉಗ್ರರು ಬೀಡು ಬಿಡುತ್ತಿರುವ ಕುರಿತಂತೆ ಮಾತನಾಡಿರುವ ಅವರು, ಭದ್ರತಾ ಪಡೆಗಳು ಕೆಚ್ಚೆದೆಯಿಂದ ಉಗ್ರರನ್ನು ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಸಂವಿಧಾನದ 35(ಎ)ವಿಧಿಯ ವಿವಾದದ ಕುರಿತಂತೆ ಸೋಮವಾರ ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ನನ್ನ ಹೇಳಿಕೆಯನ್ನು ತಿರುಚಬೇಡಿ. ಜಮ್ಮು ಮತ್ತು ಕಾಶ್ಮೀರದ ಜೊತೆಗೆ ಲಡಾಖ್ ನ್ನೂ ಸೇರಿಸಿ ನಾನು ಹೇಳಿಕೆಯನ್ನು ನೀಡಿದ್ದೆ. ಜಮ್ಮು ಮತ್ತು ಕಾಶ್ಮೀರದ ಜನತೆಯ ನಂಬಿಕೆಗಳ ವಿರುದ್ಧ ಯಾವುದೇ ಕಾರಣಕ್ಕೂ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೆ. ವಿವಾದ ಕುರಿತಂತೆ ನಾನು ಹೇಳಬೇಕಿದಿದ್ದನ್ನು ನಾನು ಹೇಳಿದ್ದೇನೆ. ಪ್ರಸ್ತುತ ವಿವಾದ ನ್ಯಾಯಾಲಯದ ಅಂಗಳದಲ್ಲಿ, ಇನ್ನೇನನ್ನೂ ನಾನು ಹೇಳಲು ಇಚ್ಛಿಸುವುದಿಲ್ಲ ಎಂದಿದ್ದಾರೆ.