ಲಕ್ನೊ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದಾಗ ಅನೇಕ ಮಂದಿ ರೈತರು ಖುಷಿಪಟ್ಟಿದ್ದರು. ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಇತ್ತೀಚೆಗೆ ಸಾಲ ಮನ್ನಾ ಮೊತ್ತ ಪಡೆದ ಅನೇಕ ರೈತರಿಗೆ ಆಘಾತ ಕಾದಿತ್ತು.
ಅಷ್ಟಕ್ಕೂ ರೈತರಿಗೆ ಸಿಕ್ಕಿದ ಸಾಲ ಮನ್ನಾ ಪ್ರಮಾಣಪತ್ರದಲ್ಲಿನ ಮೊತ್ತಗಳು ಎಷ್ಟು ಗೊತ್ತೆ? 10 ರೂ, 200 ರೂ, 350 ರೂ ಮತ್ತು 500 ರೂಪಾಯಿ.
ರೈತರ ಸಾಲದ ಮೊತ್ತದ ಪ್ರಮಾಣ ಪತ್ರವನ್ನು ವಿತರಿಸಲು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆದರೆ ಅಲ್ಲಿ ಪರಿಹಾರದ ಮೊತ್ತ ಪಡೆದ ರೈತರು ಸಪ್ಪೆ ಮುಖ ಹೊತ್ತು ಮನೆಗೆ ಮರಳುವಂತಾಯಿತು. ಹಮಿರ್ಪುರದಲ್ಲಿ ನಿರ್ಮಲಾ ದೇವಿಯವರು 1.55 ಲಕ್ಷದ ಬದಲಿಗೆ ಸಿಕ್ಕಿದ್ದು ಕೇವಲ 10 ರೂಪಾಯಿ 37 ಪೈಸೆ. ಮೌದಹ ಗ್ರಾಮದ ಮುನ್ನಿ ಲಾಲ್ ತೆಗೆದುಕೊಂಡ 40,000 ರೂ ಸಾಲ ಮನ್ನಾವಾಗಬೇಕಿದ್ದು. ಆದಜರೆ ಅವರಿಗೆ ಸಿಕ್ಕಿದ ಪರಿಹಾರದ ಮೊತ್ತ ಕೇವಲ 215 ರೂಪಾಯಿ. ಶಿವಪಾಲ್ ಎಂಬುವವರು ಬೀಜ, ಗೊಬ್ಬರ ಖರೀದಿಸಲೆಂದು 93,000 ರೂ. ಸಾಲ ಮಾಡಿದ್ದರು. ಅವರಿಗೆ 20,000 ರೂಪಾಯಿ ಸಿಕ್ಕಿದೆ. ಯೂಸಫ್ ಖಾನ್ ಎಂಬ ರೈತರಿಗೆ 60,000 ರೂ.ಸಾಲದಲ್ಲಿ ಸಿಕ್ಕಿದ ಪರಿಹಾರದ ಮೊತ್ತ ಕೇವಲ 38 ರೂಪಾಯಿ.
ಕಳೆದ ಏಪ್ರಿಲ್ 4 ರಂದು ಯೋಗಿ ಆದಿತ್ಯನಾಥ್ ಸರ್ಕಾರ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಸುಮಾರು 86 ಲಕ್ಷ ಸಣ್ಣ ಮತ್ತು ಮಧ್ಯಮ ರೈತರ ಸಾಲವನ್ನು 1 ಲಕ್ಷದವರೆಗೆ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇಷ್ಟು ಸಾಲ ತೀರಿಸಲು ಸರ್ಕಾರದ ಮೇಲೆ 36,000 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ. ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಜುಲೈ 12ರಂದು ರಾಜ್ಯ ಬಜೆಟ್ ಮಂಡಿಸಿದಾಗ ಬಡ ರೈತರಿಗೆ ತಮ್ಮ ಸಾಲ ತೀರಬಹುದೆಂಬ ಆಸೆ ಮೂಡಿತ್ತು. ಆದರೆ ಇತ್ತೀಚೆಗೆ ಸಿಕ್ಕಿದ ಸಾಲದ ಪರಿಹಾರ ಧನ ರೈತರ ಬಡತನವನ್ನು ಅಣಕಿಸುವಂತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics