ದೇಶ

ರೋಹಿಂಗ್ಯಾ ಮುಸ್ಲಿಮರನ್ನು ಇಸಿಸ್ ಬಳಸಿಕೊಳ್ಳಬಹುದು: ಸುಪ್ರೀಂಗೆ ಕೇಂದ್ರ

Lingaraj Badiger
ನವದೆಹಲಿ: ರೋಹಿಂಗ್ಯಾ ಮುಸ್ಲಿಮರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಅಲ್ಲದೆ ಅವರನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಅವರನ್ನು ಗಡಿಪಾರು ಮಾಡಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.
ಗುಪ್ತಚರ ಮಾಹಿತಿಯ ಪ್ರಕಾರ, ರೋಹಿಂಗ್ಯಾ ಮುಸ್ಲಿಮರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದು, ಆ ಸಂಘಟನೆಗಳು ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹೈದರಾಬಾದ್ ಹಾಗೂ ಮೇವಾತ್ ನಲ್ಲಿ ಸಕ್ರಿಯವಾಗಿವೆ ಎಂದು ಸರ್ಕಾರ ತಿಳಿಸಿದೆ.
ವಿಶ್ವಸಂಸ್ಥೆಯ ಹೈಕಮಿಷನರ್ ನಲ್ಲಿ ನೋಂದಣಿಯಾಗಿರುವ 14 ಸಾವಿರ ರೋಹಿಂಗ್ಯಾ ನಿರಾಶ್ರಿತರು ಸದ್ಯ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ಸರ್ಕಾರ ಆಗಸ್ಟ್ 9ರಂದು ಸಂಸತ್ತಿಗೆ ತಿಳಿಸಿತ್ತು.
ಮೂಲಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ, ಹೈದರಾಬಾದ್, ಹರಿಯಾಣ, ಉತ್ತರ ಪ್ರದೇಶ, ದೆಹಲಿ ಹಾಗೂ ರಾಜಸ್ತಾನ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಮಾರು 40 ಸಾವಿರ ರೋಹಿಂಗ್ಯಾ ಮುಸ್ಲಿಮರು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ.
SCROLL FOR NEXT