ನವದೆಹಲಿ: ಇನ್ನು ಮುಂದೆ ದೈಹಿಕವಾಗಿ ಸದೃಢರಾಗಿರುವ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಶೌರ್ಯ ಸೇವಾ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಹೊಸ ನಿಯಮವನ್ನು ಜಾರಿಗೊಳಿಸಿದೆ.
ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ನೀಡುವ ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು ಪ್ರಶಂಸನೀಯ ಸೇವೆ ಸಲ್ಲಿಸಿದವರಿಗೆ ಸಿಗುವ ಪೊಲೀಸ್ ಪದಕಗಳಿಗೆ ಈ ನಿಯಮ ಅನ್ವಯವಾಗಲಿದೆ.
ಪೊಲೀಸರ ಶಾರೀರಿಕ ಸದೃಢತೆ ವಿಚಾರದಲ್ಲಿ ಎರಡು ವಿಭಾಗಗಳಿರುತ್ತವೆ. ಒಂದನೇ ವಿಭಾಗ ಪ್ರಕಾರ, ಪೊಲೀಸರ ಮಾನಸಿಕ ಆರೋಗ್ಯ, ಶ್ರವಣ ಸಾಮರ್ಥ್ಯ, ಶಾರೀರಿಕ ಸಾಮರ್ಥ್ಯ ಮತ್ತು ದೃಷ್ಟಿ ಸಾಮರ್ಥ್ಯ ಮತ್ತು ಸಂದರ್ಭಕ್ಕೆ ತಕ್ಕಂತೆ ಪೊಲೀಸ್ ಅಧಿಕಾರಿಯ ಕರ್ತವ್ಯ ನಿಷ್ಟೆಯನ್ನು ಒಳಗೊಂಡಿರುತ್ತದೆ. ಸ್ಥೂಲಕಾಯ ಹೊಂದಿಲ್ಲದೆ ಇರುವುದು ಶಾರೀರಿಕ ಸಾಮರ್ಥ್ಯವೆನಿಸುತ್ತದೆ.
ಎರಡನೇ ವಿಧದಲ್ಲಿ ಪೊಲೀಸರು ಮಾಡುವ ಕರ್ತವ್ಯದ ರೀತಿ, ಮಾನಸಿಕ ಒತ್ತಡ ಮತ್ತು ಕೆಲವು ಮಟ್ಟದವರೆಗೆ ಶ್ರವಣ ಮತ್ತು ದೃಷ್ಟಿ ಸಾಮರ್ಥ್ಯಗಳನ್ನು ಒಳಗೊಂಡಿರುತ್ತದೆ. ಎರಡನೇ ವಿಧಕ್ಕೆ ಕೆಲವು ಸಂದರ್ಭಗಳಲ್ಲಿ ಮಾತ್ರ ವಿನಾಯ್ತಿ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕುಮಾರ್ ಅಲೋಕ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಸುತ್ತೋಲೆಯಲ್ಲಿ, ಪೊಲೀಸ್ ಪದಕ ಗಳಿಸಲು ಕನಿಷ್ಟ ಇಲಾಖೆಯಲ್ಲಿ 18 ವರ್ಷಗಳ ಸೇವೆ ಸಲ್ಲಿಸಿರಬೇಕು ಮತ್ತು ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ 25 ವರ್ಷಗಳ ಸೇವೆ ಸಲ್ಲಿಸಿರಬೇಕು ಎಂದು ಉಲ್ಲೇಖಿಸಲಾಗಿದೆ.
ಈ ಸುತ್ತೋಲೆಯ ದಾಖಲೆಯನ್ನು ಎಲ್ಲಾ ರಾಜ್ಯಗಳ ಗೃಹ ಸಚಿವಾಲಯಗಳಿಗೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಕಳುಹಿಸಲಾಗಿದೆ. ಅಲ್ಲದೆ ಕೇಂದ್ರ ಪೊಲೀಸ್ ಸಂಸ್ಥೆಯ ಮುಖ್ಯಸ್ಥರಿಗೆ ಹಾಗೂ ಕೇಂದ್ರ ಪಾರಾಮಿಲಿಟರಿ ಪಡೆಗೆ ಕೂಡ ಕಳುಹಿಸಲಾಗಿದೆ.
ಈ ಮಧ್ಯೆ ಕರ್ತವ್ಯದಲ್ಲಿ ಅತೃಪ್ತಿ ತೋರಿಸಿದ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ಲಿಂಗಲ ವಿಜಯ ಪ್ರಸಾದ್ ಅವರನ್ನು ಗೃಹ ಸಚಿವಾಲಯ ಸೇವೆಯಿಂದ ವಜಾಗೊಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos